ADVERTISEMENT

ನ್ಯಾಯಾಲಯಗಳಲ್ಲಿ ಮಧ್ಯಸ್ಥಿಕೆ ಅಭಿಯಾನ: ಜಿಲ್ಲಾ & ಸೆಷನ್ಸ್‌ ನ್ಯಾಯಾಧೀಶ ಮಾರುತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:37 IST
Last Updated 27 ಜುಲೈ 2025, 4:37 IST
ಲಿಂಗಸುಗೂರು ತಾಲ್ಲೂಕು ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಕೇಂದ್ರವನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶ ಮಾರುತಿ ಬಗಾಡೆ ಉದ್ಘಾಟಿಸಿದರು
ಲಿಂಗಸುಗೂರು ತಾಲ್ಲೂಕು ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಕೇಂದ್ರವನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶ ಮಾರುತಿ ಬಗಾಡೆ ಉದ್ಘಾಟಿಸಿದರು   

ಲಿಂಗಸುಗೂರು: ‘ನ್ಯಾಯಾಲಯಗಳಲ್ಲಿ ತ್ವರಿತವಾಗಿ ವ್ಯಾಜ್ಯಗಳ ವಿಲೇವಾರಿ ಆಗುತ್ತಿಲ್ಲ ಎಂಬ ಬೇಸರ ಜನರಲ್ಲಿದೆ. ಇದರಿಂದ ನ್ಯಾಯಾಂಗದ ಬಗ್ಗೆ ಜನರಲ್ಲಿ ಅಪನಂಬಿಕೆ ಮತ್ತು ಅವಿಶ್ವಾಸ ಮೂಡುತ್ತಿದೆ. ಆದ್ದರಿಂದ ಮಧ್ಯಸ್ಥಿಕೆ ಕೇಂದ್ರಗಳು, ಮಧ್ಯಸ್ಥಿಕೆದಾರರು ಉತ್ತಮವಾಗಿ ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಾರುತಿ ಬಗಾಡೆ ಹೇಳಿದರು.

ಪಟ್ಟಣದ ತಾಲ್ಲೂಕು ನ್ಯಾಯಲಯದಲ್ಲಿ ಶನಿವಾರ ತಾಲ್ಲೂಕು ಮಧ್ಯಸ್ಥಿಕೆ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

‘ಮಧ್ಯಸ್ಥಿಕೆ ಕೇಂದ್ರ ಮಾರ್ಚ್‌ 1ರಿಂದ ಆರಂಭವಾಗಬೇಕಾಗಿತ್ತು. ಆದರೆ, ಇಂದು ಉದ್ಘಾಟನೆ ಮಾಡಲಾಗುತ್ತಿದೆ. ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾಗಬಹುದಾದ ಪ್ರಕರಣಗಳನ್ನು ಗುರುತಿಸಿ ಎರಡು ಪಕ್ಷಗಾರರ ವಕೀಲರು ಹಾಗೂ ಕಕ್ಷಿದಾರರನ್ನು ಒಂದಡೆ ಕೂರಿಸಿ ಪ್ರಕರಣಕ್ಕೆ ನಿಜವಾದ ಕಾರಣ ಅರಿತು ಮಧ್ಯಸ್ಥಿಕೆದಾರರು ಪ್ರಕರಣ ಇತ್ಯರ್ಥಗೊಳಿಸಿ ನ್ಯಾಯಾಧೀಶರಿಗೆ ವರದಿ ನೀಡುತ್ತಾರೆ’ ಎಂದರು.

ADVERTISEMENT

‘ಇದಕ್ಕೆ ಯಾವುದೇ ಶುಲ್ಕ ಇಲ್ಲ. ಮಧ್ಯಸ್ಥಿಕೆ ಕೇಂದ್ರದಲ್ಲಿ ರಾಜಿಯಾಗುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಕಟ್ಟಿದ ಶುಲ್ಕ ವಾಪಸ್ ನೀಡಲಾಗುತ್ತಿದೆ. ಇದಕ್ಕಾಗಿ ಸುಪ್ರೀಂಕೋರ್ಟ್ ಆದೇಶದ ಅನ್ವಯ ದೇಶದ ಎಲ್ಲಾ ನ್ಯಾಯಲಯಗಳಲ್ಲಿ 90 ದಿನಗಳ ಕಾಲ ಮಧ್ಯಸ್ಥಿಕೆ ಅಭಿಯಾನ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಮಧ್ಯಸ್ಥಿಕೆ ಕೇಂದ್ರಗಳ ಸ್ಥಾಪನೆಯಿಂದ ವಕೀಲರು ತಮ್ಮ ವೃತ್ತಿಗೆ ತೊಡಕು ಎದುರಾಗುತ್ತದೆ ಎಂದು ಭಾವಿಸುವ ಅಗತ್ಯವಿಲ್ಲ. ಇಲ್ಲಿಯೂ ವಕೀಲರ ಪಾತ್ರ ಗಣನೀಯವಾದುದು. ನ್ಯಾಯಾಲಯ ವ್ಯವಸ್ಥೆಯ ಬಗ್ಗೆಯೂ ಜನತೆಯಲ್ಲಿ ನಂಬಿಕೆ ಮತ್ತು ವಿಶ್ವಾಸ ವೃದ್ಧಿಯಾಗುತ್ತದೆ. ಆದ್ದರಿಂದ ಈ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು’ ಎಂದರು.

ಜಿಲ್ಲಾ ಹಿರಿಯ ಶ್ರೇಣಿ ನ್ಯಾಯಾಧೀಶ ಎಚ್‌.ಎ.ಸಾತ್ವಿಕ್, ತಾಲ್ಲೂಕು ಹಿರಿಯ ಶ್ರೇಣಿ ನ್ಯಾಯಾಧೀಶೆ ಉಂಡಿ ಮಂಜುಳಾ, ಪ್ರಧಾನ ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ., ಮಧ್ಯಸ್ಥಿಕೆದಾರರಾದ ಕೆ.ಕೆ.ವಿಶ್ವನಾಥ, ಎಂ.ಎ.ಬಾಳೇಗೌಡ, ಎ.ನಾಗಪ್ಪ, ಮಾನಪ್ಪ ವಾಲ್ಮೀಕಿ, ನಾಗರಾಜ ಗಸ್ತಿ, ವಕೀಲರ ಸಂಘದ ಅಧ್ಯಕ್ಷ ಭೂಪನಗೌಡ ಕರಡಕಲ್, ಉಪಾಧ್ಯಕ್ಷ ಬಸವಲಿಂಗಯ್ಯ ವಸ್ತ್ರದ, ಕಾರ್ಯದರ್ಶಿ ಬಾಲರಾಜಸಾಗರ ಮಾನಮಟ್ಟಿ, ದೇವೇಂದ್ರ ನಾಯ್ಕ, ಹನುಮಂತರೆಡ್ಡಿ ಹಾಗೂ ಇನ್ನಿತರರು ಇದ್ದರು.

ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆಯ ಮೊದಲ ದಿನವೇ ರಾಜಿ ಮಾಡಿ ದಂಪತಿಗಳನ್ನು ಒಂದು ಮಾಡಲಾಯಿತು

ಸಂಸಾರ ಕೂಡಿಸಿದ ಜಡ್ಜ್

ಯಲ್ಲಪ್ಪ ಎಂಬ ವ್ಯಕ್ತಿ ನಿತ್ಯವೂ ಮದ್ಯಪಾನ ಮಾಡಿ ಬಂದು ಹೆಂಡತಿಯ ಜೊತೆಗೆ ಜಗಳ ಮಾಡುತ್ತಿದ್ದ ಕಾರಣ ಸಂಸಾರದಲ್ಲಿ ಬಿರುಕು ಉಂಟಾಗಿತ್ತು. ತಾಲ್ಲೂಕು ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆಯ ಮೊದಲ ದಿನವೇ ಯಲ್ಲಪ್ಪ ಮತ್ತು ಆತನ ಪತ್ನಿ ಭೀಮಾಬಾಯಿ ಅವರನ್ನು ಕೇಂದ್ರಕ್ಕೆ ಕರೆಯಿಸಿ ನ್ಯಾಯಾಧೀಶ ಮಾರುತಿ ಬಗಾಡೆ ಯಲ್ಲಪ್ಪನಿಗೆ‘ಕುಡಿತದ ಚಟದಿಂದ ಮಕ್ಕಳ ಮೇಲೆ ಪರಿಣಾಮ ಬೀರಿ ನೆಮ್ಮದಿ ಹಾಳಾಗುತ್ತಿದೆ. ಕುಡಿತದ ಚಟ ಬಿಟ್ಟು ಹೆಂಡತಿ–ಮಕ್ಕಳೊಂದಿಗೆ ನೆಮ್ಮದಿಯ ಜೀವನ ಸಾಗಿಸು’ ಎಂದು ತಿಳಿ ಹೇಳಿ ರಾಜಿ ಮಾಡಿದರು. ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.