ADVERTISEMENT

ಜಾಲಹಳ್ಳಿ: ಮನೆಗಳ ಹಂಚಿಕೆಗಾಗಿ ನಿಗದಿಯಾದ ಗ್ರಾಮ ಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 14:21 IST
Last Updated 28 ನವೆಂಬರ್ 2023, 14:21 IST
ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಮಂಗಳವಾರ ನಿಗದಿಪಡಿಸಿದ ಗ್ರಾಮಸಭೆಯ ನೋಡಲ್ ಅಧಿಕಾರಿ ಮುದಕಣ್ಣ ಕವಡಿಮಠ ಭೇಟಿ ನೀಡಿದರು
ಜಾಲಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಮಂಗಳವಾರ ನಿಗದಿಪಡಿಸಿದ ಗ್ರಾಮಸಭೆಯ ನೋಡಲ್ ಅಧಿಕಾರಿ ಮುದಕಣ್ಣ ಕವಡಿಮಠ ಭೇಟಿ ನೀಡಿದರು   

ಜಾಲಹಳ್ಳಿ: ಪಟ್ಟಣದ ಗ್ರಾಮ ಪಂಚಾಯಿತಿ ಕಚೇರಿಯ ಆವರಣದಲ್ಲಿ ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆಗಾಗಿ ಮಂಗಳವಾರ ನಿಗದಿಪಡಿಸಿದ ಗ್ರಾಮಸಭೆ ರದ್ದಾಗಿದೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನ.28ರಂದು ಗ್ರಾಮಸಭೆ ನಡೆಸುವಂತೆ ನೋಡಲ್ ಅಧಿಕಾರಿಯನ್ನು ಸಹ ನಿಯೋಜನೆ ಮಾಡಿದ್ದರು. ವಸತಿ ರಹಿತ ಬಡವರಿಗೆ ಹಾಗೂ ನಿರ್ಗತಿಕರಿಗೆ ಹಂಚಿಕೆ ಮಾಡಲು ನಿಗದಿಪಡಿಸಿದ ಗ್ರಾಮ ಸಭೆಯು ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಬೇಜವ್ದಾರಿಯಿಂದ ರದ್ದಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸ್ಥಳೀಯ ಗ್ರಾ.ಪಂ.ಗೆ ಅಂಬೇಡ್ಕರ್ ವಸತಿ ನಿಗಮದಿಂದ 50 ಮನೆಗಳು ಮಂಜೂರಾಗಿದ್ದು, ಈ ಪೈಕಿ 20 ಮನೆಗಳು ಪರಿಶಿಷ್ಟ ಜಾತಿ, 30 ಪರಿಶಿಷ್ಟ ಪಂಗಡಕ್ಕೆ ನಿಗದಿ ಪಡಿಸಲಾಗಿದೆ. ಇನ್ನು ಬಸವ ವಸತಿ ಯೋಜನೆಯ 150 ಮನೆಗಳನ್ನು ನೀಡಲಾಗಿದೆ. ಅದರಲ್ಲಿ 130 ಹಿಂದುಳಿದ ವರ್ಗಕ್ಕೆ, 20 ಅಲ್ಪಸಂಖ್ಯಾತರಿಗೆ ನಿಗದಿಪಡಿಸಲಾಗಿದೆ.

ADVERTISEMENT

ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ ಅವರನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ಅವರ ಬದಲಿಗೆ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಮುದಕಣ್ಣ ವಿ.ಕವಡಿಮಠ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಧ್ಯಾಹ್ನ 2 ಗಂಟೆಯವರೆಗೆ ಕಾದುಕುಳಿತರು. ನಂತರ ಪಿಡಿಒ ಪತ್ಯಾಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಸಮಸ್ಯೆಯ ಬಗ್ಗೆ ತಿಳಿದುಕೊಂಡು ಪತ್ರ ಬರೆದು ತಾ.ಪಂ ಇಒಗೆ ಸಲ್ಲಿಸುವುದಾಗಿ ಹೇಳಿ ಹೊರಟು ಹೋದರು.

ಬಸವ ವಸತಿ ಯೋಜನೆ ಅಡಿ ಆಯ್ಕೆಯಾದ ಪ್ರತಿ ಫಲಾನುವಿಗೆ ₹1.19 ಲಕ್ಷ ಸಹಾಯಧನ ಇದೆ. ಅಂಬೇಡ್ಕರ್ ವಸತಿ ನಿಗಮದ ಅಡಿ ಆಯ್ಕೆಯಾದ ಫನುಭವಿಗೆ ₹1.80 ಲಕ್ಷ ಸಹಾಯಧನ ಸೌಲಭ್ಯ ಇದೆ.

ಪಿಡಿಒಗಳು ನರೇಗಾ ಯೋಜನೆಯಡಿ ಮಾಡಿದ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವುದು ಕೂಡ ಗ್ರಾಮಸಭೆ ನಡೆಯದಿರಲು ಒಂದು ಕಾರಣ ಎನ್ನಲಾಗಿದೆ. ನ.30ರ ಒಳಗೆ ಆಯ್ಕೆ ಮಾಡಿದ ಫಲಾನುಭವಿಗಳ ಪಟ್ಟಿ ತಾ.ಪಂ ಸಲ್ಲಿಸುವಂತೆ ಅದೇಶ ಮಾಡಿದರೂ ನಿರ್ಲಕ್ಷ್ಯ ಮಾಡಲಾಗಿದೆ. ಪಿಡಿಒಗಳ ತಪ್ಪಿಗೆ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಜನರು ದೂರಿದ್ದಾರೆ.

ಈ ಸಂದರ್ಭದಲ್ಲಿ ಗ್ರಾ.ಪಂ ಕರವಸೂಲಿಗಾರ ವೆಂಕೋಬ, ಗ್ರಾ.ಪಂ ಸದಸ್ಯರಾದ ಮಕ್ತೂಮ್ ಪಾರಶಿ, ಅಯ್ಯಪ್ಪ ಸ್ವಾಮಿ, ತಿಮ್ಮಣ್ಣ ನಾಯಕ, ಸೊಲಬಣ್ಣ ಹಂಪರಗುಂದಿ, ವೀರೇಶ ನಾಯಕ, ಮುಖಂಡರಾದ ಶಂಕರಗೌಡ ಪಾಟೀಲ, ಹುಸೇನ ನಾಸಿ, ಮುದ್ದರಂಗಪ್ಪ, ಬೂತಪ್ಪ‌ ದೇವರಮನಿ ಇದ್ದರು.

ಪಿಡಿಒಗಳ ನಿರ್ಲಕ್ಷ್ಯದಿಂದ ಗ್ರಾಮ ಸಭೆ ನಡೆಯದಿದ್ದಲ್ಲಿ ಮನೆಗಳು ವಾಪಸ್‌ ನಿಗಮಕ್ಕೆ ಹೋಗಲಿವೆ. ತಾಲ್ಲೂಕಿನ ಜನ ಅವರನ್ನು ಕ್ಷಮಿಸುವುದಿಲ್ಲ. ಒಂದು ವೇಳೆ ಮನೆ ವಾಪಸ್‌ ಹೋದರೆ ಗ್ರಾ.ಪಂ.ಗಳ ಮುಂದೆ ಪ್ರತಿಭಟನೆ ಕೈಗೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.