
ರಾಯಚೂರು: ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ನಗರದಲ್ಲಿ ನಗರದಲ್ಲಿ ಶನಿವಾರ ಜನಪದ ಕಲಾ ತಂಡಗಳ ಅದ್ದೂರಿ ಮೆರವಣಿಗೆ ನಡೆಯಿತು.
ಡೊಳ್ಳು ಕುಣಿತ, ಡೊಳ್ಳು ವಾದ್ಯ, ಹಲಗೆ ವಾದನ, ಗೊಂಬೆ ಕುಣಿತ, ಕುದುರೆ ಕುಣಿತ ತಂಡಗಳ ಭಾಗವಹಿಸುವಿಕೆಯಿಂದ ಮೆರವಣಿಗೆಯಲ್ಲಿ ಸಡಗರ ತುಂಬಿತ್ತು ವಿದ್ಯಾರ್ಥಿಗಳು, ಸಾಹಿತಿಗಳು ನೀಲಿಪೇಠಾ ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿ ಸಮ್ಮೇಳನದ ಸರ್ವಾಧ್ಯಕರ ಮೆರವಣಿಗೆಗೆ ಸಾಕ್ಷಿಯಾದರು.
ನೀಲಿ ಸೀರೆ ತೊಟ್ಟು ಬಂದಿದ್ದ ಅನೇಕ ಮಹಿಳೆಯರು ಹಲಗೆ ವಾದನಕ್ಕೆ ಹೆಜ್ಜೆ ಹಾಕಿದರು. ಯುವಕರು ಸಹ ಸಾಂಪ್ರದಾಯಿಕ ವಾದ್ಯಗಳ ವಾದನಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಹಲವರು ಕುಣಿಯುತ್ತಲೇ ಸೆಲ್ಫಿ ತೆಗೆದುಕೊಂಡರು.
ಬಸವೇಶ್ವರ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ಬಂದಾಗ ಸಾಹಿತಿಗಳು ಹಾಗೂ ಗಣ್ಯರು ಸಂವಿಧಾನ ಶಿಲ್ಪಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಮೆರವಣಿಗೆ ಮಾರ್ಗದಲ್ಲಿ ನೀಲಿ ಧ್ವಜ ಹಾಗೂ ನೀಲಿ ಬಟ್ಟೆಗಳನ್ನು ಕಟ್ಟಲಾಗಿತ್ತು. ಅಲ್ಲಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು.
ಮೆರವಣಿಗೆಯಲ್ಲಿ ಸಾಗಿದ್ದ ಯುವಕರು ಬಾಬಾಸಾಹೇಬರ ಜಯ ಘೋಷ ಮೊಳಗಿಸಿ ಕೃತಜ್ಞತಾ ಭಾವ ವ್ಯಕ್ತಪಡಿಸಿದರು. ಸಾರೋಟಿನಲ್ಲಿ ಆಸಿನರಾಗಿದ್ದ ಸಮ್ಮೇಳನದ ಸರ್ವಾಧ್ಯಕ್ಷೆ ಜಯದೇವಿ ಗಾಯಕವಾಡ ಅವರು ಅಭಿಮಾನಿಗಳತ್ತ ಕೈಬೀಸಿ ಸಂಭ್ರಮಿಸಿದರು.
ಇದಕ್ಕೂ ಮೊದಲು ಮೇಯರ್ ನರಸಮ್ಮ ಮಾಡಗಿರಿ ಅವರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಮ್ಮೇಳನಾಧ್ಯಕ್ಷೆ ಜಯದೇವಿ ಗಾಯಕವಾಡ ಅವರ ಅದ್ದೂರಿ ಮೆರವಣಿಗೆಗೆ ಚಾಲನೆ ನೀಡಿದರು. ನಗರಸಭೆ ಸದಸ್ಯ ಜಯಣ್ಣ, ಮಹಮ್ಮದ್ ಶಾಲಂ, ನರಸರೆಡ್ಡಿ, ಚಂದಪ್ಪ, ಬಸವರಾಜ ಗುರಿ, ಶರಣಪ್ಪ ವಡ್ಡನಕೇರಿ ಪಾಲ್ಗೊಂಡಿದ್ದರು.
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜೇಂದ್ರ ಜಲ್ದಾರ್ ಧ್ವಾಜಾರೋಹಣ ನೆರವೇರಿಸಿದರು. ತಹಶೀಲ್ದಾರ್ ಸುರೇಶ ವರ್ಮಾ, ಇಒ ಚಂದ್ರಶೇಖರ ರಾಠೋಡ, ಸಾಹಿತಿ ಬಸವರಾಜ ಐನೋಳ್ಳಿ, ತೆರಿಗೆ ಅಧಿಕಾರಿ ಅಂಬಾದಾಸ್ ಕಾಂಬಳೆ ಪಾಲ್ಗೊಂಡಿದ್ದರು.
ಮೆರವಣಿಗೆ ಮಾರ್ಗದಲ್ಲಿ ಸಂಚಾರ ಒತ್ತಡ ಉಂಟಾಗದಂತೆ ನಗರದ ಪೊಲೀಸರು ಬಂದೋಬಸ್ತ್ ಮಾಡಿದ್ದರು. ರೈಲು ನಿಲ್ದಾಣ ರಸ್ತೆಯಲ್ಲಿ ಸಂಚಾರ ಒತ್ತಡ ಉಂಟಾಗದಂತೆ ನಿರ್ವಹಣೆ ಮಾಡಿದ್ದರಿಂದ ವಾಹನಗಳು ಸರಾಗವಾಗಿ ಸಾಗಲು ಸಾಧ್ಯವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.