ADVERTISEMENT

ಐಐಐಟಿ ಸ್ಥಾಪನೆಯಿಂದ ಅಭಿವೃದ್ಧಿ ಸಾಧ್ಯ

ಉಪಮುಖ್ಯಮಂತ್ರಿ ಡಾ.ಅಶ್ವತ್ಥ್‌ ನಾರಾಯಣ ಅವರಿಂದ ಮನವರಿಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 14:45 IST
Last Updated 25 ಫೆಬ್ರುವರಿ 2020, 14:45 IST
ರಾಯಚೂರು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ನೂತನ ಕ್ಯಾಂಪಸ್‌ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಮಂಗಳವಾರ ಭೇಟಿ ನೀಡಿ ಮಾತನಾಡಿದರು
ರಾಯಚೂರು ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ನೂತನ ಕ್ಯಾಂಪಸ್‌ಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಮಂಗಳವಾರ ಭೇಟಿ ನೀಡಿ ಮಾತನಾಡಿದರು   

ರಾಯಚೂರು: ‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಐಐಐಟಿ ಸ್ಥಾಪನೆ ಆಗುವುದರಿಂದ ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಂಶೋಧನೆ, ಅಭಿವೃದ್ಧಿ ಸಾಧ್ಯವಾಗಲಿದೆ’ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ್‌ ನಾರಾಯಣ ಅವರು ಮನವರಿಕೆ ಮಾಡಿದರು.

ತಾಲ್ಲೂಕಿನ ವಡವಾಟಿ ಸಮೀಪ ಐಐಐಟಿ ಸ್ಥಾಪನೆಗೆ ಮೀಸಲಿಟ್ಟ ಜಾಗಕ್ಕೆ ಮಂಗಳವಾರ ಭೇಟಿ ನೀಡಿ, ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.

ಅದೊಂದು ಜ್ಞಾನಕೇಂದ್ರವಾಗಿ ಬೆಳೆಯಲಿದೆ. ಇದಕ್ಕೆ ಪೂರಕವಾಗಿ ಅನೇಕ ಸರ್ಕಾರಿ ಸೌಲಭ್ಯಗಳು ಬರಲಿವೆ. ಇದು ₹165 ಕೋಟಿ ಯೋಜನೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇ 50:50 ಅನುಪಾತದಲ್ಲಿ ಅನುದಾನ ಒದಗಿಸಲಿವೆ ಎಂದರು.

ADVERTISEMENT

ರಾಜ್ಯ ಸರ್ಕಾರದಿಂದ ಕೂಡಲೇ ₹15 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು. ಐಐಐಟಿ ಮೀಸಲು ಜಾಗದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಪರ್ಯಾಯ ಕೃಷಿ ಭೂಮಿ ಒದಗಿಸಲು ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಕ್ಯಾಂಪಸ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ರಾಯಚೂರು ಜಿಲ್ಲೆ ಕೇಂದ್ರದ ಮಹತ್ವಾಕಾಂಕ್ಷಿ ಜಿಲ್ಲೆಗಳ ಪಟ್ಟಿಯಲ್ಲಿದೆ ಹಾಗೂ 371- ಜೆ ಕಲಂ ವ್ಯಾಪ್ತಿಯಲ್ಲಿ ಇರುವುದರಿಂದ ಐಐಐಟಿ ಪ್ರವೇಶದಲ್ಲಿ ಏನಾದರೂ ಮೀಸಲಾತಿ ಕೊಡುವ ಬಗ್ಗೆ‌ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗವುದು ಎಂದು ಹೇಳಿದರು.

ಐಐಐಟಿ ತಾತ್ಕಾಲಿಕವಾಗಿ ಹೈದರಾಬಾದ್‌ನಲ್ಲಿ ಕಾರ್ಯಾರಂಭ ಮಾಡಿರುವುದನ್ನು ರಾಯಚೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇದಕ್ಕಾಗಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸ್ಥಳಾವಕಾಶ ಮಾಡುತ್ತಿದ್ದು, ಅಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಈಗಾಗಲೇ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಎಂಜಿನಿಯರಿಂಗ್‌ ಕಾಲೇಜಿಗೆ ಭೇಟಿ:ಯರಮರಸ್‌ ಕ್ಯಾಂಪ್‌ ಹತ್ತಿರದ ಸರ್ಕಾರಿ ಎಂಜಿನಿಯರಿಂಗ್‌ ನೂತನ ಕ್ಯಾಂಪಸ್‌ ಹಾಗೂ ತಾತ್ಕಾಲಿಕ ಐಐಐಟಿ ಪ್ರಾರಂಭಿಸಲು ಉದ್ದೇಶಿಸಿದ ಕಟ್ಟಡಗಳಿಗೆ ಸಚಿವ ಡಾ.ಅಶ್ವತ್ಥ್‌ ನಾರಾಯಣ ಭೇಟಿ ನೀಡಿದರು. ಕಾಲೇಜಿನ ಮಾಹಿತಿ ಪಡೆದು ಮಾತನಾಡಿದ ಅವರು, ಜಿಲ್ಲೆಯ ಜನಪ್ರತಿನಿಧಿಗಳು ಶಿಕ್ಷಣಕ್ಕೆ ಬಹಳಷ್ಟು ಮಹತ್ವ ಕೊಡುತ್ತಿದ್ದಾರೆ. ಶಿಕ್ಷಣದ ಮೂಲಕ ಸಮಸ್ಯೆಗಳನ್ನು ಪರಿಹರಿಸಬಹುದು ಎನ್ನುವ‌ ನಂಬಿಕೆ ಇಟ್ಟುಕೊಂಡಿರುವುದು ಅಭಿನಂದನಿಯ. ಐಐಐಟಿ ರಾಯಚೂರಿಗೆ ಬರುತ್ತಿರುವುದು ಬಹಳಷ್ಡು ಅನುಕೂಲ ಆಗಲಿದೆ ಎಂದು ಹೇಳಿದರು.

ಜಿಲ್ಲೆಯ ವೈದ್ಯಕೀಯ ಕಾಲೇಜಿಗಾಗಿ ₹150 ಕೋಟಿ ಅನುದಾನ ಬಂದಿದೆ. ಎಂಜಿನಿಯರಿಂಗ್ ಕಾಲೇಜಿಗೆ ₹6 ಕೋಟಿ‌ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ದಲ್ಲಿ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವಂತೆ ಪ್ರತಿಯೊಬ್ಬ ಸಚಿವರಿಗೆ ಮುಖ್ಯಮಂತ್ರಿಯೇ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಸರ್ಕಾರದ ಸೌಲಭ್ಯಗಳನ್ನು ಪಡೆದು ಎಂಜಿನಿಯರಿಂಗ್‌ ಓದಿದ ವಿದ್ಯಾರ್ಥಿಗಳು ಸಮಾಜಕ್ಕೆ ಏನಾದರೂ ಕೊಡುಗೆ‌ ನೀಡಬೇಕು. ರಾಜ್ಯದಲ್ಲಿ ಇನ್ನು ಮುಂದೆ ಹೊಸದಾಗಿ ಎಂಜಿನಿಯರಿಂಗ್‌ ಕಾಲೇಜು ಆರಂಭಿಸುವುದಿಲ್ಲ. ಇರುವ ಕಾಲೇಜಿಗೆ‌ಮೂಲ ಸೌಕರ್ಯ ಮಾಡಲಾಗುವುದು ಎಂದು ಹೇಳಿದರು.

ಜ್ಞಾನವೃದ್ಧಿಗೆ ಬೇಕಾಗುವ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಎಲ್ಲರ ಸಹಕಾರ ಪಡೆಯಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಪ್ರಮುಖ ಸಮಸ್ಯೆಗಳನ್ನು ಆರು ತಿಂಗಳಲ್ಲಿ ಪರಿಹರಿಸಲಾಗುವುದು ಎಂದರು.

ಯರಗೇರಾ ಪಿಜಿ ಸೆಂಟರ್‌: ತಾಲ್ಲೂಕಿನ ಯರಗೇರಾದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಹಾಗೂ ಪ್ರಸ್ತಾಪಿತ ರಾಯಚೂರು ವಿಶ್ವವಿದ್ಯಾಲಯಕ್ಕೆ ಸಚಿವರು ಭೇಟಿ ನೀಡಿ ಮಾಹಿತಿ ಪಡೆದರು.

ರಾಯಚೂರು ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಹಿಂದುಳಿದ ಜಿಲ್ಲೆಗಳ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಮುಜಾಫರ್ ಅಸಾದಿ ಹೇಳಿದರು.

ಭವಿಷ್ಯದ ಆಧಾರದ ಮೇಲೆ 300 ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾಲಯ ನಿರ್ಮಾಣವಾಗಬೇಕಾಗಿದೆ. ವಿಶ್ವವಿದ್ಯಾಲಯಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಒದಗಿಸಬೇಕೆಂದು ಸರ್ಕಾರಕ್ಕೆ ಬೇಡಿಕೆ ನೀಡಲಾಗಿದೆ ಎಂದರು.

ಕಾಲೇಜು ಉದ್ಘಾಟನೆ: ನಗರದಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡವನ್ನು ಉನ್ನತ ಶಿಕ್ಷಣ ಸಚಿವರು ಮಂಗಳವಾರ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದ ರಾಜಾ ವೆಂಕಟಪ್ಪ ನಾಯಕ, ಶಾಸಕ ಶಿವರಾಜ್ ಪಾಟೀಲ, ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಗುಲಬುರ್ಗಾ ವಿಶ್ವವಿದ್ಯಾಲಯ ಅಧಿಕಾರಿಗಳು, ವಿವಿಧ ವಿಭಾಗಗಳ ಅಧಿಕಾರಿಗಳು, ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.