ADVERTISEMENT

ಸೂರ್ಯ-ಚಂದ್ರ ಇರುವವರೆಗೂ ಸಂವಿಧಾನ ಅಸ್ತಿತ್ವದಲ್ಲಿ: ಪ್ರೊ.ಜೆ.ಎಸ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 7:08 IST
Last Updated 28 ನವೆಂಬರ್ 2025, 7:08 IST
ರಾಯಚೂರಿನ ಜಿಲ್ಲಾ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ನಿತೀಶ್‌ ಹಾಗೂ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಮಾರುತಿ ಬಾಗಡೆ ಅವರು ಪುಷ್ಪ ಸಮರ್ಪಿಸಿದರು
ರಾಯಚೂರಿನ ಜಿಲ್ಲಾ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ನಿತೀಶ್‌ ಹಾಗೂ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಮಾರುತಿ ಬಾಗಡೆ ಅವರು ಪುಷ್ಪ ಸಮರ್ಪಿಸಿದರು   

ರಾಯಚೂರು: ‘ಸೂರ್ಯ ಚಂದ್ರರಿರುವವರೆಗೂ ಭಾರತದ ಸಂವಿಧಾನ ಇರುತ್ತದೆ. ಇದೇ ಭಾರತದ ಭವಿಷ್ಯವಾಗಿದೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಜೆ.ಎಸ್.ಪಾಟೀಲ ಹೇಳಿದರು.

ರಾಯಚೂರು ನ್ಯಾಯವಾದಿಗಳ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ನಗರದ ಜಿಲ್ಲಾ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

‘ಸಂವಿಧಾನ ರಚನಾ ಪ್ರಕ್ರಿಯೆಯು 1947ಕ್ಕಿಂತ ಮೊದಲೇ ನಡೆದಿತ್ತು. ಸಂವಿಧಾನ ರಚನೆಯ ಮಹತ್ತರ ಜವಾಬ್ದಾರಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಗಲಿಗೆ ಹೊರಿಸಲಾಯಿತು. ಸಂವಿಧಾನವನ್ನು ಪ್ರತಿಯೊಬ್ಬರು ಓದಬೇಕು, ಅಧ್ಯಯನ ಮಾಡಬೇಕು. ಅಂದಾಗಲೇ ಸಂವಿಧಾನ ರಚನೆಯ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹಾಕಿದ ಶ್ರಮ ಎಷ್ಟಿತ್ತು ಎಂಬುದು ಪ್ರತಿಯೊಬ್ಬರಿಗೂ ಅರ್ಥವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಉತ್ತರಗಳನ್ನು ಓದುವಾಗ ಮೈನವಿರೇಳುತ್ತದೆ ಅಂಬೇಡ್ಕರ್ ಅವರು ಸಂಸ್ಕೃತ ಭಾಷೆಯನ್ನು ಕಲಿತಿದ್ದರು. ಸಂಸ್ಕೃತವನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಸಂವಿಧಾನ ರಚನೆಯ ವೇಳೆ ಅಲ್ಲಲ್ಲಿ ಸಂಸ್ಕೃತದ ಶ್ಲೋಕಗಳನ್ನು ಸೇರಿಸಿರುವುದು ಅವರ ಘನತೆಯನ್ನು ಎತ್ತಿ ತೋರಿಸಿದೆ’ ಎಂದರು.

‘ಸಂವಿಧಾನಕ್ಕೆ ಧಕ್ಕೆ ತರುವಂತಹ ಸಂದರ್ಭಗಳು ಎದುರಾದಾಗ ಆ ವೇಳೆ ಸುಪ್ರೀಂಕೋರ್ಟ್ ಸಂವಿಧಾನವನ್ನು ರಕ್ಷಣೆ ಮಾಡಿದೆ. ಅನೇಕ ನ್ಯಾಯಾಧೀಶರು ತಲೆದಂಡ ಕೊಟ್ಟು ಸಂವಿಧಾನ ಉಳಿಸಿದ್ದಾರೆ’ ಎಂದು ಹೇಳಿದರು.

‘ವರ್ಗಿಕೃತ ವ್ಯವಸ್ಥೆಯ ನಮ್ಮ ಸಮಾಜದಲ್ಲಿ ಸಮಾನತೆ ತುರುವ ಕಾರ್ಯವು ಅಷ್ಟು ಸುಲಭವಾದ ಕಾರ್ಯವಲ್ಲ. ಈ ಸಮಾಜದಲ್ಲಿ ಸರ್ವರೂ ಸಮಾನರಾಗಿರಬೇಕು. ಸರ್ವರೂ ಆರ್ಥಿಕವಾಗಿ ಸಬಲರಾಗಿರಬೇಕು ಎಂದು ಯೋಜಿಸಿ ಅದಕ್ಕಾಗಿಯೇ ಅಂಬೇಡ್ಕರ್ ಅವರು ಸಂವಿಧಾನ ಬದ್ಧವಾಗಿ ಮೀಸಲು ಸೌಕರ್ಯ ಜಾರಿ ತಂದರು‘ ಎಂದು ವಿವರಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಮಾರುತಿ ಬಾಗಡೆ ಮಾತನಾಡಿ, ‘ಈ ದೇಶದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ದೃಷ್ಟಿಯಿಂದ ಬಹುಮುಖ್ಯವಾಗಿರುವ ಸಂವಿಧಾನವು ನಮಗೇ ನಾವೇ ರೂಪಿಸಿಕೊಂಡಿರುವ ಸ್ವಯಂವಿಧಾನವಾಗಿದೆ. ಸಂವಿಧಾನದಲ್ಲಿರುವ ಅಧ್ಯಾಯಗಳು, ಅನುಸೂಚಿಗಳು ಮತ್ತು ಕಾಯಿದೆಗಳು ಪ್ರತಿಯೊಂದು ಅತ್ಯಂತ ಅರ್ಥಪೂರ್ಣ ಮತ್ತು ಮಹತ್ವದ್ದಾಗಿವೆ‘ ಎಂದು ಬಣ್ಣಿಸಿದರು.

ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, ‘ಸಮಾಜದಲ್ಲಿರುವ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಸಂವಿಧಾನಬದ್ಧ ಹಕ್ಕು ಮತ್ತು ಬಾಧ್ಯತೆಗಳು ಲಭಿಸಲು, ಅವರಿಗೆ ನ್ಯಾಯದೊರೆತು ಸಂವಿಧಾನದ ಮೌಲ್ಯಗಳು ಕೈಗೆಟುಕುವಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ‘ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಎಚ್.ಎ.ಸಾತ್ವಿಕ್, ಜಿಲ್ಲಾ ಸರ್ಕಾರಿ ವಕೀಲ ರಾಮನಗೌಡ ಮರ್ಚೆಟ್ಟಾಳ್, ಮಹಾನಗರ ಪಾಲಿಕೆಯ ಉಪ ಆಯುಕ್ತ ಸಂತೋಷರಾಣಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಲಾಯಿತು. ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ಸಮಿತಿ, ಕಾರ್ಯಕಾರಿಣಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ವಕೀಲ ಚನ್ನಬಸವಣ್ಣ ನಿರೂಪಿಸಿದರು. ಯಲ್ಲಪ್ಪ ಪ್ರಾರ್ಥಿಸಿದರು. ಹನುಮಂತಪ್ಪ ಮೇಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.