ADVERTISEMENT

ರಾಯಚೂರು | ಕೃಷಿ ಮೇಳದಲ್ಲಿ ಕೀಟಗಳ ಖ್ಯಾದ…!!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 4:50 IST
Last Updated 6 ಫೆಬ್ರುವರಿ 2026, 4:50 IST
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಆಕರ್ಷಣೆಯಾಗಿದ್ದ ಕೀಟಗಳಿಂದ ತಯಾರಿಸಿದ ಖಾದ್ಯಗಳು
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಮೇಳದಲ್ಲಿ ಆಕರ್ಷಣೆಯಾಗಿದ್ದ ಕೀಟಗಳಿಂದ ತಯಾರಿಸಿದ ಖಾದ್ಯಗಳು   

ರಾಯಚೂರು: ಊಟದಲ್ಲಿ ಹುಳ ಕಂಡರೂ ವಾಕರಿಕೆ ಬಂದು ಊಟವನ್ನು ಅರ್ಧಕ್ಕೆ ಬಿಡುವವರೇ ಹೆಚ್ಚು. ಹೀಗಿರುವಾಗ ಜಿರಳೆ, ರೇಷ್ಮೆ ಹುಳದಂತ ಹುಳು ಹುಪ್ಪಡಿಯಿಂದ ತಯಾರಿಸಿದ ಖಾದ್ಯಗಳು ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಎಡದೊರೆ ನಾಡು ಜಿಲ್ಲಾ ಉತ್ಸವ ಪ್ರಯುಕ್ತ ಗುರುವಾರ ನಡೆದ ಕೃಷಿ ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನದಲ್ಲಿ ವಿವಿಧ ಕೀಟಗಳಿಂದ ತಯಾರಿಸಿದ ಖಾದ್ಯಗಳು ಗಮನ ಸೆಳೆಯಿತು.

ಉತ್ತರ ಭಾರತದ ಕೆಲ ಪ್ರದೇಶಗಳ, ಚೀನಾ ಸೇರಿದಂತೆ ದೇಶ, ವಿದೇಶಗಳಲ್ಲಿ ಜನ ಈಗಾಗಲೆ ಕೆಲವು ಕೀಟಗಳನ್ನು ಬಳಸಿ ಸ್ವಾದಿಷ್ಟ ಹಾಗೂ ಆರೋಗ್ಯಯುತ ಖಾದ್ಯಗಳನ್ನು ತಯಾರಿಸಿ ಸೇವಿಸುತ್ತಿದ್ದಾರೆ. ಜನಸಂಖ್ಯೆ ಹೆಚ್ಚುತ್ತಿರುವ ಇಂದಿನ ದಿನಮಾನಗಳಲ್ಲಿ ಸುಸ್ಥಿರ ಆಹಾರ ಭದ್ರತೆಯನ್ನು ಸಾಧಿಸುವುದು ಪ್ರಸ್ತುತ ಅತಿದೊಡ್ಡ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ.

ADVERTISEMENT

12 ಬಗೆಯ ಕೀಟ ಖಾದ್ಯಗಳು:

ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಪನೀರ್ ಸ್ಟಿಕ್ ಮತ್ತು ಕಪ್ ಕೇಕ್, ಮಿಡತೆ ಬರ್ಗರ್, ಸ್ಯಾಂಡಿಚ್, ಸಿಕಾಡ್ ಸೂಪ್, ಕಣಜ ಹುಳುವಿನ ಮಸಾಲ, ಮಿಡತೆ ಫ್ರೈ, ರೇಷ್ಮೆಹುಳು ಕೋಶದ ಚಾಕಲೇಟ್‌, ಕೀಟ್ ಬೇಬಿ ಕಾರ್ನ್, ಚಿಗಳಿ ಚಟ್ನಿ, ಮಿಡತೆ ಕಬಾಬ್‌, ಎರಿ ರೇಷ್ಮೆ ಹುಳುವಿನ ಬಾರ್ಬಿಕ್ಯೂ, ಮೀಲ್ವರಂ ಫ್ರೈಡ್‌ರೈಸ್‌, ರೇಷ್ಮೆಹುಳು ಕೋಶದ ಸೂಪ್‌, ಜಿರಳೆ ಪಕೋಡ, ಬೇರು ಹುಳುವಿನ ಬಾರ್ಬಿಕ್ಯೂ ಸೇರಿದಂತೆ 12 ಬಗೆ ಕೀಟಗಳ ಖಾದ್ಯ ನೋಡಿ ಬಾಯಲ್ಲಿ ನೀರೂರಿಸಿದವರಿಗಿಂತ, ಮುಖ ಸಿಂಡರಿಸಿದವರೇ ಹೆಚ್ಚು. ಆದರೂ ಭವಿಷ್ಯದಲ್ಲಿ ಆಹಾರ ಅಭದ್ರತೆಯನ್ನು ಪರಿಹರಿಸಬಲ್ಲ, ಕೀಟಗಳಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ಸಾರ್ವಜನಿಕರು ಬಹಳ ಕುತೂಹಲದಿಂದಲೇ ವಿಕ್ಷಿಸುತ್ತಿದ್ದಾರೆ ಎಂದು ಕೀಟ ಶಾಸ್ತ್ರದ ಪಿಹೆಚ್ ಡಿ ವಿದ್ಯಾರ್ಥಿನಿ ತೇಜಸ್ವಿನಿ ಹೇಳತ್ತಾರೆ.

ಆರೋಗ್ಯಕರ ಕಾರಣ:

ಕೀಟಗಳ ಸೇವನೆ ಆರೋಗ್ಯಕರ ಕಾರಣಗಳಿಗಾಗಿ ಗಮನ ಸೆಳೆಯುತ್ತಿದೆ. ಪ್ರೋಟೀನ್, ಕೊಬ್ಬು, ಖನಿಜಗಳು, ಜೀವಸತ್ವಗಳು ಮತ್ತು ನಾರಿನಂಶಗಳಲ್ಲಿ ಹೆಚ್ಚಿನ ಅಂಶವನ್ನು ಹೊಂದಿರುವ ವ್ಯಾಪಕ ಶ್ರೇಣಿಯ ಖಾದ್ಯ ಕೀಟ ಪ್ರಭೇದಗಳು ಆಹಾರ ಅಭದ್ರತೆಯನ್ನು ಪರಿಹರಿಸುವಲ್ಲಿ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಪ್ರಪಂಚದಾದ್ಯಂತ ಒಂದು ಬಿಲಿಯನ್‌ಗೂ ಹೆಚ್ಚು ಜನರು ಕೀಟಗಳನ್ನು ಆಹಾರವಾಗಿ ಬಳಸುತ್ತಾರೆ. ಕೃಷಿ ಪ್ರದೇಶ ಕಡಿಮೆಯಾಗಿ ಆಹಾರ ಉತ್ಪಾದನೆಯಲ್ಲಿ ಕೊರತೆಯಾಗುವಂತ ಪರಿಸ್ಥಿತಿಯಲ್ಲಿ ಈ ಕೀಟಗಳನ್ನು ಆಹಾರ ಧಾನ್ಯಗಳಿಗೆ ಪರ್ಯಾಯವಾಗಿ ಬಳಸಬಹುದಾಗಿದೆ. ಕೀಟಗಳನ್ನು ಆಹಾರವಾಗಿ ಬಳಸುವುದರಿಂದ ಆರೋಗ್ಯಕ್ಕೂ ಹೆಚ್ಚು ಸಹಕಾರಿಯಾಗುತ್ತದೆ ಎಂದು ಪಿಎಚ್‌ಡಿ ವಿದ್ಯಾರ್ಥಿನಿ ರಕ್ಷಿತಾ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.