
ಮುದಗಲ್: ಸಮೀಪದ ನವಲಿ ಗ್ರಾಮದ ಜಡೆಯ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ನವೆಂಬರ್ 20ರಂದು ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ.
ಗುರುವಾರ ಛಟ್ಟಿ ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆ, ಅನ್ನ ದಾಸೋಹ ಮತ್ತು ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗುತ್ತದೆ. ಹುಬ್ಬಳ್ಳಿ, ಬೆಂಗಳೂರು, ಇಂಡಿ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಹುಬ್ಬಳ್ಳಿಯ ಬಣಗಾರ ಸಮಾಜದವರಿಂದ ದೇವಸ್ಥಾನ ಅಭಿವೃದ್ಧಿ ಕಂಡಿದೆ.
ಕೃಷ್ಣೆಯ ದಡದಲ್ಲಿರುವ ನವಲಿ ಗ್ರಾಮ ತೀರ್ಥಸ್ನಾನಕ್ಕೆ ಪ್ರಸಿದ್ಧಿ ಪಡೆದಿದೆ. ದೇವಸ್ಥಾನದ ಆವರಣದಲ್ಲಿ ಕ್ರಿ.ಶ 1,060ರಲ್ಲಿ ದೊರೆತ ಶಾಸನದಲ್ಲಿ ಹಾಗೂ ಹುನಗುಂದ ತಾಲ್ಲೂಕಿನ ನಂದವಾಡಗಿ ಹತ್ತಿರ ದೊರೆತ ಶಾಸನದಲ್ಲಿ ಭಾವನಗಂಧವಾರಣ ಎಂಬ ಸಾಮಂತ ಅರಸ ನವಲೆಯ ಜಡೆಶಂಕರಲಿಂಗ ದೇವಸ್ಥಾನ ಕಟ್ಟಿಸಿದ ಎಂದು ಉಲ್ಲೇಖಿಸಲಾಗಿದೆ.
ನವಲಿಯನ್ನು ಮೊದಲು ಶಿವಪುರ, ಸಿಕಿಪುರ, ಮಯೂರಪುರ ಮತ್ತು ನವಲಿಪುರ ಹೆಸರಿನಿಂದ ಕರೆಯಲಾಗುತ್ತಿತ್ತು. ಇಲ್ಲಿ ಸಾಕಷ್ಟು ನವಿಲುಗಳು ಇದ್ದವು. ಹಾಗಾಗಿ ಗ್ರಾಮಕ್ಕೆ ನವಲಿ ಎಂದು ಹೆಸರು ಬಂದಿದೆ. ಊರಲ್ಲಿ ಏಳು ಸುತ್ತಿನ ಕೋಟೆ ಹಾಗೂ ಏಳು ಅಗಸಿ ಬಾಗಿಲುಗಳು ಇದ್ದವು. ಬಸವಸಾಗರ ಜಲಾಶಯ ನಿರ್ಮಾಣವಾದಾಗಿನಿಂದ ಹಿನ್ನೀರಿನಲ್ಲಿ ಗ್ರಾಮ ಮುಳುಗಡೆಯಾಗಿದೆ. ಊರನ್ನು ಸ್ಥಳಾಂತರ ಮಾಡಲಾಗಿದೆ.
ಕಲ್ಯಾಣ ಚಾಲುಕ್ಯರ ವಾಸ್ತು ಶೈಲಿ ಹೊಂದಿದ ಈ ದೇವಾಲಯ, ಪೂರ್ವ ಅಭಿಮುಖವಾಗಿ ನಿರ್ಮಾಣಗೊಂಡಿದೆ. ದೇವಾಲಯಕ್ಕೆ ಗ್ರಾನೈಟ್ ಕಲ್ಲುಗಳನ್ನು, ಬಾಗಿಲು ವಾಡಗೆ ಕ್ಲೋರಿ ಪಿಸ್ಟ್ ಕಲ್ಲು ಬಳಸಿದ್ದಾರೆ.
ದೇವಾಲಯಕ್ಕೆ ಅಧಿಷ್ಠಾನ, ನವರಂಗ ಇದೆ. ಗರ್ಭಗೃಹದಲ್ಲಿ ಪ್ರಾಚೀನ ಲಿಂಗ ಹಾಗೂ ಇದರ ಮುಂದೆ ನಂದಿ ಮೂರ್ತಿ ಇದೆ. ಲಿಂಗದ ನೆತ್ತಿಯ ಮೇಲಿಂದ ಹಿಂಬದಿಯ ಪಾಣಿಬಟ್ಟಲವರೆಗೆ ಜಡೆಯನ್ನು ಒಳಗೊಂಡಿದೆ. ಇದರಿಂದಾಗಿ ಈ ಲಿಂಗಕ್ಕೆ ಜಡೆ ಶಂಕರಲಿಂಗ ಎಂದು ಕರೆಯುತ್ತಿದ್ದಾರೆ. ದೇವಾಲಯಕ್ಕೆ ಏಳು ಶಾಖೆಗಳ ಬಾಗಿಲವಾಡಗಳಿದ್ದು, ಇದರಲ್ಲಿ ದೇವಗಂಧರ್ವ ಯಕ್ಷ, ಪ್ರಾಣಿ–ಪಕ್ಷಿಗಳ ಉಬ್ಬುಶಿಲ್ಪಗಳಿವೆ. ಗರ್ಭಗೃಹದ ಮೇಲೆ ಏಳು ಸ್ತರದ ಶಿಖರವಿದೆ. ಶಿಖರದ ಮೇಲೆ ಗಾರೆಯಿಂದ ನಿರ್ಮಿಸಿದ ಉಬ್ಬುಶಿಲ್ಪಗಳಿವೆ.
ವಚನಕಾರರ ನಂಟು
ಬಾಗಲಕೋಟೆ ಜಿಲ್ಲೆಯ ಕಂದಗಲ್ ಗೋವಿಂದಭಟ್ಟರು ಆರ್ಥಿಕ ತೊಂದರೆಯಿಂದ ಕಾಶಿ ವಿಶ್ವೇಶ್ವರನ ದರ್ಶನಕ್ಕೆ ಹೋಗುವುದಕ್ಕೆ ಆಗದೆ ಕೃಷ್ಣಾ ನದಿಯ ದಡದಲ್ಲಿರುವ ನವಲೆ ಶಂಕರಲಿಂಗ ದೇವರನ್ನೇ ಕಾಶಿ ವಿಶ್ವನಾಥ ಎಂದು ಪೂಜಿಸುತ್ತಾರೆ. ಶಂಕರಲಿಂಗನಿಂದ ಇಷ್ಟಲಿಂಗ ದೀಕ್ಷೆ ಪಡೆದ ಗೋವಿಂದ ಭಟ್ಟರು ಶಂಕರ ದಾಸಿಮಯ್ಯ ಆಗುತ್ತಾರೆ. ಇವರ ಪತ್ನಿ ಶಿವದಾಸಿ ಎಂದು ಕರೆಸಿಕೊಳ್ಳುತ್ತಾಳೆ. ನಿಜಗುರು ಶಂಕರದೇವಾ ಎಂಬ ಅಂಕಿತದಲ್ಲಿ ರಚಿಸಿದ ಐದು ವಚನಗಳು ಉಪಲಬ್ಧವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.