ADVERTISEMENT

ಗುರುಗುಂಟಾ: ಬಿಳಿ ಜೋಳಕ್ಕೆ ಕೆಂಪುಹುಳು ಕಾಟ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 5:46 IST
Last Updated 8 ಜನವರಿ 2026, 5:46 IST
   

ಹಟ್ಟಿ ಚಿನ್ನದ ಗಣಿ: ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಬೆಳೆದ ಜೋಳದ ಬೆಳೆಗೆ ಹುಳುಗಳ ಕಾಟ ಹೆಚ್ಚಾಗಿದ್ದು, ರೈತರಲ್ಲಿ ಆತಂಕ ಉಂಟಾಗಿದೆ.

ಯಲಗಟ್ಟಾ, ಮಾಚನೂರು, ಕೋಠಾ, ಮೇಧಿನಾಪೂರ, ಗೆಜ್ಜಲ ಗಟ್ಟಾ, ಆನ್ವರಿ, ನಿಲೋಗಲ್, ವೀರಾಪೂರ, ಮೇದಿನಾಪೂರ, ಕಡ್ಡೊಣಿ, ಗೌಡೂರು, ಪೈದೊಡ್ಡಿ, ಯರಜಂತಿ, ಬಂಡೆಭಾವಿ ಗ್ರಾಮದ ರೈತರು ನೀರಾವರಿ ಪ್ರದೇಶದಲ್ಲಿ 267 ಹೆಕ್ಟೇರ್, ಒಣಭೂಮಿಯಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ
ಮಾಡಿದ್ದಾರೆ.

‘ಹೈನುಗಾರಿಕೆ ಮಾಡಿ ಆರ್ಥಿಕತೆ ಸುಧಾರಿಸಿಕೊಳ್ಳಬೇಕು ಎಂದುಕೊಂಡರೆ ಜಾನುವಾರಗಳಿಗೆ ಬೇಸಿಗೆ ಕಾಲದಲ್ಲಿ ಮೇವು ಬೇಕು. ಆದರೆ, ಹುಳು ಕಾಟದಿಂದ ಜೋಳದ‌ ಕಣಿಕೆ ಸಿಗದಂತೆ ಆಗಬಹುದು’ ಎನ್ನುತ್ತಾರೆ ರೈತ ದುರುಗಪ್ಪ.

ADVERTISEMENT

ಜೋಳದ ಬೆಳೆಯ ಸುಳಿಯಲ್ಲಿರುವ ಹುಳುಗಳನ್ನು ಕೊಲ್ಲುವುದು ರೈತರಿಗೆ ಸವಾಲಾಗಿದೆ. ‌ಎಲೆಗಳು ಕೆಂಪು‌ ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ಇದರಿಂದ ಸಾಲ ಮಾಡಿ ಬಿತ್ತನೆ ಮಾಡಿದರೂ ಫಲ ಕೈಗೆ ಬರುವುದಿಲ್ಲ ಎಂಬ ಬೇಸರ ರೈತರದ್ದು. 

ಮಳೆಯಿಂದ ಅನೇಕ ಬೆಳೆಗಳು ಹಾಳಾಗಿವೆ. ಜೋಳಕ್ಕೆ ಕೆಂಪು ಸುಳಿ ರೋಗದ ಕಾಟ ಹೆಚ್ಚಾಗಿದ್ದು, ಈ ಭಾಗದ ರೈತರು ಕಂಗಾಲಾಗಿದ್ದಾರೆ.

ಜೋಳಕ್ಕೆ ಯಾವುದೇ ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಿಲ್ಲ. ಕೆಲವು ವರ್ಷದಿಂದ ಜೋಳಕ್ಕೆ ರೋಗ ತಗುಲುತ್ತಿದ್ದು, ರೈತರನ್ನು ಚಿಂತೆಗೆ ತಳ್ಳಿದೆ ಎನ್ನುತ್ತಾರೆ ಅಂಬಣ್ಣ.

ರೈತರ ನೆರವಿಗೆ ಆಗಮಿಸಬೇಕಾದ ಅಧಿಕಾರಿಗಳು ಸಮಸ್ಯೆಗಳನ್ನು ಆಲಿಸುವಲ್ಲಿ ವಿಫಲವಾಗಿದ್ದಾರೆ. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ನೆರವಿಗೆ ಬರಬೇಕು ಎನ್ನುವುದು ಅನ್ನದಾತರ ಆಗ್ರಹ. 

ಬಿಳಿ ಜೋಳದ‌ ಬೆಳೆಗೆ ಕೆಂಪು‌ ಹುಳುವಿನ ಕಾಟ ಹೆಚ್ಚಾಗಿದ್ದು, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಲಿ.
– ದುರುಗಪ್ಪ, ಗೌಡೂರು ಗ್ರಾಮದ ರೈತ 
ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತ ಸಂರ್ಪಕ ಕೇಂದ್ರಕ್ಕೆ ಆಗಮಿಸಿ ಮಾಹಿತಿ ಪಡೆದುಕೊಳ್ಳಿ.
ಹನುಮಂತ ರಾಠೋಡ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ
ಬೆಳೆಗಳು ಹಾಳಾಗುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ
– ಬಸವರಾಜ, ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲ್ಲೂಕು ಕಾರ್ಯದರ್ಶಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.