ADVERTISEMENT

ಭಾಷೆ ಬೆಳವಣಿಗೆಗೆ ಕೈಜೋಡಿಸಿ

ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹರೀಶ ರಾಮಸ್ವಾಮಿ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 16:27 IST
Last Updated 29 ನವೆಂಬರ್ 2020, 16:27 IST
ಕನ್ನಡ ನುಡಿಹಬ್ಬ ಕಾರ್ಯಕ್ರಮದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ರಾಮಸ್ವಾಮಿ ಅವರು ಮಾತನಾಡಿದರು
ಕನ್ನಡ ನುಡಿಹಬ್ಬ ಕಾರ್ಯಕ್ರಮದಲ್ಲಿ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ರಾಮಸ್ವಾಮಿ ಅವರು ಮಾತನಾಡಿದರು   

ರಾಯಚೂರು: ಕನ್ನಡ ಭಾಷೆ ಪ್ರಾಚೀನ, ಶ್ರೀಮಂತ ಭಾಷೆಯಾಗಿದೆ. ಆದರೆ ಬೆಳವಣಿಗೆಯಲ್ಲಿ ಇತರೆ ಭಾಷೆಗಿಂತ ಹಿಂದೆ ಇದೆ. ಭಾಷೆಯ ಬೆಳವಣಿಗೆಗೆ ತಾಂತ್ರಿಕ ಸುಧಾರಣೆಯಾಗಬೇಕಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹರೀಶ ರಾಮಸ್ವಾಮಿ ತಿಳಿಸಿದರು.

ಕನ್ನಡ ರಾಜ್ಯೋತ್ಸವ ಮಾಸಾಚರಣೆ ಅಂಗವಾಗಿ ನಗರದ ಕರ್ನಾಟಕ ಸಂಘದಲ್ಲಿ ಹಮ್ಮಿಕೊಳ್ಳಲಾದ ಕನ್ನಡ ನುಡಿಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕನ್ನಡ ಭಾಷೆ ಶ್ರೀಮಂತ ಭಾಷೆ. ಆದರೆ ಇತ್ತೀಚಿನ‌ ದಿನಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ವ್ಯವಸ್ಥೆ ವಿಷಯಾಂತರ ಮಾಡುತ್ತಿದೆ. ಕನ್ನಡ ಭಾಷಾಂತರದ ಕೊರತೆ ಎದುರಿಸುತ್ತಿದೆ. ಸಾಹಿತಿಗಳು ಈ ಕೊರತೆ ನೀಗಿಸಬೇಕಿದೆ ಎಂದು ಸಲಹೆ ನೀಡಿದರು.

ಕನ್ನಡ ಭಾಷೆಯ‌ ಬೆಳವಣಿಗೆಗೆ ಐತಿಹಾಸಿಕ ಸ್ಥಳ, ಪ್ರಾದೇಶಿಕ ಮಹತ್ವದ ಬಗ್ಗೆ‌ ಸಾಹಿತಿಗಳು ಕೃತಿ ರಚನೆ ಮಾಡಿ ಅವುಗಳನ್ನು ಉಳಿಸಿ‌ ಬೆಳೆಸಲು ಚಳವಳಿ ರೂಪಿಸಬೇಕಿದೆ. ನಮ್ಮ ನೆಲ, ಜಲವನ್ನು ಬದಲಾವಣೆ ಮಾಡಬೇಕು. ನಮ್ಮ ಅಸ್ಮಿತೆಯನ್ನು ಉಳಿವಿಗೆ ಶ್ರಮಿಸಬೇಕು ಇದಕ್ಕೆ ನಾಗರಿಕರ ಹೃದಯಗಳು‌ ಮಿಡಿಯಬೇಕು ಎಂದರು.

ADVERTISEMENT

‘ನೂತನ ರಾಯಚೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಹಲವಾರು ವಿಷಯ ತಿಳಿದುಕೊಂಡಿದ್ದೇನೆ. ಇಲ್ಲಿನ ಶೈಕ್ಷಣಿಕ‌ ಅಭಿವೃದ್ಧಿಗಾಗಿ‌ ಹೊಸ ಯೋಜನೆ ರೂಪಿಸಲಾಗುವುದು. ಇಲ್ಲಿನ ವಿದ್ಯಾರ್ಥಿಗಳು ಬಹಳ ಜಾಣ್ಮೆ ಆದರೆ ಅವಕಾಶ, ಮೂಲಸೌಕರ್ಯದ ಕೊರತೆಯಿಂದಾಗಿ ಹಿಂದುಳಿದಿದ್ದಾರೆ. ಇಲ್ಲಿನ‌ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಪರಿಹರಿಸಿ‌ ಶೈಕ್ಷಣಿಕ ಸುಧಾರಣೆಗೆ ಕೆಲಸ ಮಾಡಲಾಗುವುದು‘ ಎಂದು‌ ಭರವಸೆ ನೀಡಿದರು.

ಕನ್ನಡ ಸಾಹಿತ್ಯ ಅಕಾಡೆಮಿಯ ಸದಸ್ಯ ಶರಬೇಂದ್ರ ಸ್ವಾಮಿ, ಕನ್ನಡ ಭಾಷೆ ಕೇವಲ ಮಾಧ್ಯಮವಾಗದೇ ಕನ್ನಡಿಗರನ್ನು ಒಟ್ಟುಗೂಡಿಸುವ ಸಾಧನವಾಗಿದೆ. ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕು. ಕನ್ನಡ ಭಾಷೆಯ ಬೆಳೆದು‌ ಬಂದ ಹಾದಿ ಅರ್ಥೈಸಿಕೊಂಡು ಕನ್ನಡ ಉಳಿವಿಗಾಗಿ ಕೈ ಜೋಡಿಸಬೇಕು ಎಂದು ಹೇಳಿದರು.

ಕರ್ನಾಟಕ‌ ಸಂಘದ‌ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿ, ಕರ್ನಾಟಕ ಸಂಘಕ್ಕೆ ತನ್ನದೇ ಆದ ಇತಿಹಾಸ ಹೊಂದಿದೆ. ರಾಜಕಾರಣಿಯಾದರೂ ಕೂಡ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದು ಶೀಘ್ರವೇ ಸಭಾ ಭವನ ನಿರ್ಮಾಣ ಪೂರ್ಣಗೊಳಿಸಿ ಸಾಹಿತ್ಯ ಚಟುವಟಿಕೆ ನಡೆಯುವಂತೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಸಂಘದ ಸದಸ್ಯೆ ಶೀಲಾದಾಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂಬಯ್ಯ‌ನುಲಿ, ಸಾಹಿತಿ‌ ಚಿದಾನಂದ ಸಾಲಿ ಅವರನ್ನು‌ ಸನ್ಮಾನಿಸಲಾಯಿತು. ಸಾಹಿತಿ ದಸ್ತಗೀರಸಾಬ್ ದಿನ್ನಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.