ADVERTISEMENT

ಕವಿತಾಳ: ನನೆಗುದಿಗೆ ಬಿದ್ದ ಶಾಲಾ ಕ್ರೀಡಾಂಗಣ ಕಾಮಗಾರಿ

ಮೂರು ವರ್ಷಗಳಿಂದ ಹಾಲಾಪುರ ಸರ್ಕಾರಿ ಪ್ರೌಢಶಾಲೆ ಮಕ್ಕಳಿಗೆ ತೊಂದರೆ

ಮಂಜುನಾಥ ಎನ್ ಬಳ್ಳಾರಿ
Published 11 ಮಾರ್ಚ್ 2025, 6:12 IST
Last Updated 11 ಮಾರ್ಚ್ 2025, 6:12 IST
<div class="paragraphs"><p>ವಿತಾಳ ಸಮೀಪದ ಹಾಲಾಪುರ ಪ್ರೌಢಶಾಲೆ ಆವರಣದಲ್ಲಿ ಮುರಂ ಹರಡಿರುವುದು</p></div>

ವಿತಾಳ ಸಮೀಪದ ಹಾಲಾಪುರ ಪ್ರೌಢಶಾಲೆ ಆವರಣದಲ್ಲಿ ಮುರಂ ಹರಡಿರುವುದು

   

ಕವಿತಾಳ: ಇಲ್ಲಿಗೆ ಸಮೀಪದ ಹಾಲಾಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 2021-22ರಲ್ಲಿ ಆರಂಭವಾದ ಕ್ರೀಡಾಂಗಣ ನಿರ್ಮಾಣ  ಕಾಮಗಾರಿ ಮೂರು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಹೀಗಾಗಿ ಮಕ್ಕಳಿಗೆ ಆಟವಾಡಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕೆಕೆಆರ್‌ಡಿಬಿಯ ಅಂದಾಜು ₹50 ಲಕ್ಷ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಕೈಗೊಂಡ ಭೂಸೇನಾ ನಿಗಮದ ಅಧಿಕಾರಿಗಳು, ಶಾಲಾ ಆವರಣದಲ್ಲಿ ಮುರಂ ಹಾಕಿದ್ದು ಹೊರತು ಪಡಿಸಿದರೆ ಬೇರೆ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಅಂದಾಜು ಪಟ್ಟಿ ಪ್ರಕಾರ ರನ್ನಿಂಗ್ ಟ್ರ್ಯಾಕ್, ಕಬಡ್ಡಿ ಕೋರ್ಟ್, ಕೊಕ್ಕೊ ಕೋರ್ಟ್, ವಾಲಿಬಾಲ್ ಕೋರ್ಟ್ ಮತ್ತು ಥ್ರೋ ಬಾಲ್ ಕೋರ್ಟ್ ನಿರ್ಮಿಸುವ ಕಾಮಗಾರಿ ಬಾಕಿ ಉಳಿದಿವೆ.

ADVERTISEMENT

‘ಕಾಮಗಾರಿ ಆರಂಭದಲ್ಲಿ ಕಲ್ಲುಮಿಶ್ರಿತ ಕಳಪೆ ಗುಣಮಟ್ಟದ ಮುರಂ ಹಾಕುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಸ್ವಲ್ಪ ಗುಣಮಟ್ಟದ ಮುರಂ ಹಾಕಿ ಆವರಣದಲ್ಲಿ ಹರಡಿದ ಅಧಿಕಾರಿಗಳು ಕಾಂಪೌಂಡ್ ನಿರ್ಮಾಣವು ತಮ್ಮ ಯೋಜನೆ ವ್ಯಾಪ್ತಿಯಲ್ಲಿಲ್ಲ ಎಂದು ಜಾರಿಕೊಂಡಿದ್ದಾರೆ’ ಎನ್ನುವುದು ಸ್ಥಳೀಯರ ಆರೋಪ.

‘ಮುರಂ ಹರಡಿದ ಪರಿಣಾಮ ಆವರಣ ಸಮತಟ್ಟು ಇಲ್ಲದಂತಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಓಡಾಡಲು ಮತ್ತು ಆಟವಾಡಲು ತೊಂದರೆಯಾಗುತ್ತಿದೆ. ವಿಶಾಲವಾದ ಆವರಣದಲ್ಲಿ ಮೊದಲು ಬೆಳಿಗ್ಗೆ ಸಂಜೆ ಸ್ಥಳೀಯರು ವಾಕಿಂಗ್ ಮಾಡುತ್ತಿದ್ದರು. ಈಗ ಅದೂ ಸಾಧ್ಯವಾಗುತ್ತಿಲ್ಲ. ಭೂಸೇನಾ ನಿಗಮದ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸುವ ಕುರಿತು ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರಾದ ಮಲ್ಲಯ್ಯ ಭೋವಿ, ಫಯಾಜ್, ಚನ್ನಬಸವ ಮತ್ತು ದುರುಗೇಶ ದೂರಿದರು.

‘ಕ್ರೀಡಾಂಗಣ ಕಥೆ ಈ ರೀತಿಯಾದರೆ ಶಾಲೆಗೆ ಮೂರು ದಿಕ್ಕಿನಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿದ್ದು, ಇನ್ನೊಂದು ಕಡೆ ಬಾಕಿ ಉಳಿದ ಪರಿಣಾಮ ದನಕರುಗಳ ಹಾವಳಿ ಹೆಚ್ಚಿದೆ. ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಪಡುವಂತಾಗಿದೆ. ಹತ್ತನೇ ತರಗತಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ಕಾಂಪೌಂಡ್ ಇಲ್ಲದ ಕಾರಣ ಪರೀಕ್ಷಾ ಕೇಂದ್ರದ ಭದ್ರತೆಗೆ ಆತಂಕ ಎದುರಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕಾಂಪೌಂಡ್‌ ನಿರ್ಮಾಣ ಸಾಧ್ಯವಾಗಿಲ್ಲ’ ಎಂದು ಸರ್ಕಾರಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.

ಕ್ರೀಡಾಂಗಣ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಶಾಸಕರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಭೂಸೇನಾ ನಿಗಮದ ಎಂಜಿನಿಯರ್‌ ಸ್ಪಂದಿಸುತ್ತಿಲ್ಲ ಸಿದ್ದಾರ್ಥ ಪಾಟೀಲ ಹಾಲಾಪುರ, ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ

ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಶೇ 40 ರಷ್ಟು ಹಣ ಬಿಡುಗಡೆಯಾಗಿದ್ದು, ಅಷ್ಟು ಕಾಮಗಾರಿ ಕೈಗೊಳ್ಳಲಾಗಿದೆ. ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸಿದ್ದು, ಹಣ ಬಿಡುಗಡೆಯಾದರೆ ಕಾಮಗಾರಿ ಆರಂಭಿಸಲಾಗುವುದು ಕಾಶಿನಾಥ, ಸಹಾಯಕ ಎಂಜಿನಿಯರ್‌, ಭೂಸೇನಾ ನಿಗಮ ರಾಯಚೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.