ADVERTISEMENT

ಕವಿತಾಳ: ವರ್ಷ ಸಮೀಪಿಸಿದರೂ ಮುಗಿಯದ ರಸ್ತೆ ಕಾಮಗಾರಿ

ಹದಗೆಟ್ಟ ದೋತರಬಂಡಿ ರಸ್ತೆ: ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 8:15 IST
Last Updated 29 ಜನವರಿ 2026, 8:15 IST
ಕವಿತಾಳ ಸಮೀಪದ ದೋತರಬಂಡಿಯಿಂದ ಮರಕಂದಿನ್ನಿ ಸಂಪರ್ಕಿಸುವ ರಸ್ತೆಯ ದುಸ್ಥಿತಿ
ಕವಿತಾಳ ಸಮೀಪದ ದೋತರಬಂಡಿಯಿಂದ ಮರಕಂದಿನ್ನಿ ಸಂಪರ್ಕಿಸುವ ರಸ್ತೆಯ ದುಸ್ಥಿತಿ   

ಕವಿತಾಳ: ಸಮೀಪದ ದೋತರಬಂಡಿ ಗ್ರಾಮದಿಂದ ಮರಕಂದಿನ್ನಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ಪರದಾಡುವಂತಾಗಿದೆ.

ಡಾಂಬರು ರಸ್ತೆಯಿಂದ ಸಂಪೂರ್ಣ ಮಣ್ಣಿನ ರಸ್ತೆಯಾಗಿ ಪರಿವರ್ತೆಯಾಗಿದ್ದು, ರಸ್ತೆಯಲ್ಲಿನ ಬೃಹತ್‌ ಗುಂಡಿಗಳು ಬೈಕ್‌ ಸವಾರರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿವೆ. ಮಣ್ಣಿನ ರಸ್ತೆಯಲ್ಲಿ ತಗ್ಗು ಕಾಣದೆ ಬೈಕ್‌ ಸವಾರರು ಆಯತಪ್ಪಿ ಬಿದ್ದು ಕೈ– ಕಾಲು ಮುರಿದುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪವಾಗಿದೆ.

‘ಅಂದಾಜು ₹4 ಕೋಟಿ ವೆಚ್ಚದಲ್ಲಿ 2.3 ಕಿ.ಮೀ ರಸ್ತೆ ದುರಸ್ತಿಗೆ 2025ರ ಮಾರ್ಚ್‌ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚುವುದಕ್ಕೂ ಕಾಳಜಿ ವಹಿಸುತ್ತಿಲ್’ ಎಂದು ಆರೋಪಿಸುತ್ತಾರೆ ದೋತರಬಂಡಿ ಗ್ರಾಮದ ಈರಣ್ಣ ಮತ್ತು ಮಲ್ಲಯ್ಯ.

ADVERTISEMENT

‘ದೋತರಬಂಡಿ, ಉದ್ಬಾಳ, ಮರಕಂದಿನ್ನಿ, ಮಲ್ಕಾಪುರ, ಉಟಕನೂರು, ತೋರಣದಿನ್ನಿ ಹಾಗೂ ಪೊತ್ನಾಳ ಗ್ರಾಮಗಳಿಗೆ ತೆರಳುವ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ವಾಹನ ಸಂಚಾರದಿಂದ ವಿಪರೀತ ದೂಳು ಹರಡುತ್ತಿದ್ದು, ಹಿಂದಿನಿಂದ ಬರುವ ಬೈಕ್‌ ಸವಾರರು ಮತ್ತು ವಾಹನಗಳಿಗೆ ಎದುರಿನ ದಾರಿ ಕಾಣದಂತಾಗುತ್ತದೆ. ದೂಳಿನಿಂದ ರಸ್ತೆ ಬದಿ ಜಮೀನುಗಳಲ್ಲಿ ಬೆಳೆಗಳು ಹಾಳಾಗುತ್ತಿವೆ’ ಎಂಬುದು ಗ್ರಾಮಸ್ಥರ ಅಳಲು.

‘ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ವಾಹನ ಸಂಚಾರಕ್ಕೆ ವಿಶೇಷವಾಗಿ ಭತ್ತ ಸಾಗಾಣಿಕೆಗೆ ಸಮಸ್ಯೆಯಾಗಿದೆ. ಈಗಾಗಲೇ ದೂಳು ಹರಡುತ್ತಿದ್ದು ಬೇಸಿಗೆ ಅವಧಿಯಲ್ಲಿ ಇನ್ನೂ ಹೆಚ್ಚುತ್ತದೆ. ಹೀಗಾಗಿ ಬೇಗ ಕಾಮಗಾರಿ ಆರಂಭಿಸಬೇಕು. ಗುಣಮಟ್ಟ ಕಾಯ್ದುಕೊಳ್ಳುವುದರ ಜೊತೆಗೆ ಶೀಘ್ರ ಪೂರ್ಣಗೊಳಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ಕವಿತಾಳ ಸಮೀಪದ ದೋತರಬಂಡಿಯಿಂದ ಮರಕಂದಿನ್ನಿ ಸಂಪರ್ಕಿಸುವ ರಸ್ತೆಯ ದುಸ್ಥಿತಿ
ರಸ್ತೆ ಹದಗೆಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರೂ ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ. ₹4 ಕೋಟಿ ಮಂಜೂರಾಗಿದ್ದರೂ ಪ್ರಯೋಜನವಾಗಿಲ್ಲ
ಶಿವರಾಜ ದೋತರಬಂಡಿ ಗ್ರಾಮಸ್ಥ
ಮಳೆಗಾಲ ಆರಂಭವಾಗಿದ್ದರಿಂದ ಆಗ ಕಾಮಗಾರಿ ನಡೆಯಲಿಲ್ಲ. ನಂತರ ಕೆಲವು ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ. ಶೀಘ್ರದಲ್ಲಿಯೇ ದುರಸ್ತಿ ಕೆಲಸ ಆರಂಭಿಸಲಾಗುವುದು
ರಜತ್‌ ಸಹಾಯಕ ಎಂಜಿನಿಯರ್‌ ಪಿಡಬ್ಲ್ಯೂಡಿ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.