ADVERTISEMENT

ಕವಿತಾಳ: ಅಂಚೆ ಸೇವೆಗಳು ಹಲವು, ಸೌಲಭ್ಯಗಳು ಗೌಣ

ಕವಿತಾಳದ ಉಪ ಅಂಚೆ ಕಚೇರಿಯಲ್ಲಿ ಮೂಲ ಸೌಲಭ್ಯಗಳ ಕೊರತೆ

ಮಂಜುನಾಥ ಬಳ್ಳಾರಿ
Published 29 ಮಾರ್ಚ್ 2024, 6:22 IST
Last Updated 29 ಮಾರ್ಚ್ 2024, 6:22 IST
ಕವಿತಾಳದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಉಪ ಅಂಚೆ ಕಚೇರಿ
ಕವಿತಾಳದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಉಪ ಅಂಚೆ ಕಚೇರಿ   

ಕವಿತಾಳ: ಪಟ್ಟಣದ ಉಪ ಅಂಚೆ ಕಚೇರಿ ಸ್ವಂತ ಕಟ್ಟಡ ಸೇರಿದಂತೆ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದು, ಕಚೇರಿಗೆ ಬರುವ ಗ್ರಾಹಕರಿಗೆ ಕುಳಿತುಕೊಳ್ಳಲು ಆಸನಗಳೂ ಇಲ್ಲ.

ಸ್ವಂತ ಕಟ್ಟಡ ಇಲ್ಲದ ಕಾರಣ ಇಲ್ಲಿನ ಬಜಾರ್‌ನಲ್ಲಿ ಗೋದಾಮಿನಂಥ ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಶೌಚಾಲಯ, ಕುಡಿಯುವ ನೀರು, ಗ್ರಾಹಕರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಪೀಠೋಪಕರಣಗಳು, ಪ್ರತ್ಯೇಕ ಕೌಂಟರ್ ವ್ಯವಸ್ಥೆ, ದಾಖಲೆಗಳ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ, ಗಾಳಿ, ಬೆಳಕು ಇಲ್ಲದೆ ದಾಸ್ತಾನು ಮಳಿಗೆಯಂತೆ ಉಸಿರುಗಟ್ಟಿಸುವ ವಾತಾವರಣದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂಚೆ ಬಟವಾಡೆ ಜತೆಗೆ ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ, ಉಳಿತಾಯ ಖಾತೆ, ಆರ್.ಡಿ. ಗುಂಪು ವಿಮೆ ಮತ್ತು ವಿವಿಧ ವಿಮಾ ಯೋಜನೆಗಳು ಸೇರಿದಂತೆ ಹಲವು ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು ಪ್ರತಿನಿತ್ಯ 50ಕ್ಕೂ ಹೆಚ್ಚು ಗ್ರಾಹಕರು ಸೇವೆ ಪಡೆಯುತ್ತಿದ್ದಾರೆ.

ADVERTISEMENT

ಉಪ ಅಂಚೆ ಮಾಸ್ತರರು ಸೇರಿದಂತೆ 7 ಹುದ್ದೆಗಳ ಮಂಜೂರಾತಿ ಇದೆ. ಸದ್ಯ ಒಬ್ಬ ಸಿಬ್ಬಂದಿ ನಿವೃತ್ತರಾಗಿದ್ದು, ಅವರ ಜಾಗಕ್ಕೆ ಬೇರೆಯವರ ನೇಮಕವಾಗಿಲ್ಲ ಮತ್ತು ಒಬ್ಬರು ಎರವಲು ಸೇವೆಯಲ್ಲಿದ್ದಾರೆ.

ಹಳೇ ಕಟ್ಟಡವಾದ ಕಾರಣ ಇಲಿ, ಹೆಗ್ಗಣಗಳ ಕಾಟ ಮಿತಿ ಮೀರಿದೆ. ಹೀಗಾಗಿ ದಾಖಲೆಗಳು ಹಾಳಾಗದಂತೆ ಕಾಪಾಡುವುದು ಮತ್ತು ಕಂಪ್ಯೂಟರ್‌ಗಳ ಸುರಕ್ಷತೆಗೆ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

ಮಾಸಾಶನ ಪಡೆಯಲು ಬರುವ ಅಂಗವಿಕಲರು ಮತ್ತು ವೃದ್ಧರಿಗೆ ರ್‍ಯಾಂಪ್‌ ಇಲ್ಲದೆ ಹೊರಗೆ ಕಟ್ಟೆ ಮೇಲೆ ಕುಳಿತು ವ್ಯವಹರಿಸಬೇಕಿದೆ. ಕಟ್ಟಡ ನಿರ್ಮಾಣಕ್ಕೆ ಗುರುತಿಸಿದ ಇಲಾಖೆಯ ಸ್ವಂತ ನಿವೇಶನಕ್ಕೆ ಕಾಂಪೌಂಡ್ ಸಹಿತ ನಿರ್ಮಾಣ ಮಾಡಲಾಗಿದೆ. ಆದರೆ ಹೆದ್ದಾರಿ ನಿರ್ಮಾಣ ಗೊಂದಲದಿಂದ ಕಟ್ಟಡ ನಿರ್ಮಾಣಕ್ಕೆ ಇಲಾಖೆ ಮುಂದಾಗಿಲ್ಲ ಎನ್ನಲಾಗುತ್ತಿದೆ.

‘ಸದ್ಯ ಈ ಕಟ್ಟಡಕ್ಕೆ ಮಾಸಿಕ ₹3 ಸಾವಿರ ಬಾಡಿಗೆ ನೀಡಲಾಗುತ್ತಿದೆ. ಇಷ್ಟು ಕಡಿಮೆ ಬಾಡಿಗೆಗೆ ಮುಖ್ಯ ರಸ್ತೆಯಲ್ಲಿ ಕಟ್ಟಡ ಸಿಗುವುದಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಚೇರಿ ನಡೆಸುತ್ತಿದ್ದೇವೆ. ಸ್ವಂತ ಕಟ್ಟಡವಾದರೆ ಪೀಠೋಪಕರಣಗಳ ವ್ಯವಸ್ಥೆ ಜತೆಗೆ ಗ್ರಾಹಕರಿಗೆ ಆಸನ ವ್ಯವಸ್ಥೆ ಹಾಗೂ ಮೂಲ ಸೌಕರ್ಯ ಒದಗಿಸಲು ಅನುಕೂಲವಾಗುತ್ತದೆ’ ಎಂದು ಉಪ ಅಂಚೆ ಮಾಸ್ತರ್‌ ಮುರ್ತುಜಾಸಾಬ್‌ ಅಭಿಪ್ರಾಯಪಟ್ಟರು.

ಅಂಚೆ ಕಚೇರಿಯ ಸ್ವಂತ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಗ್ರಾಹಕರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು.
–ಎಂ.ಡಿ.ಮೆಹಬೂಬ್‌, ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.