ADVERTISEMENT

ರಾಯಚೂರು, ಕೊಪ್ಪಳದಲ್ಲಿ ‘ಪರಿಷತ್‌’ ಚುನಾವಣೆ ಸಂಚಲನ

ಗ್ರಾಮ ಪಂಚಾಯಿತಿ ಸದಸ್ಯರತ್ತ ರಾಜಕೀಯ ಪಕ್ಷಗಳ ಚಿತ್ತ

ನಾಗರಾಜ ಚಿನಗುಂಡಿ
Published 13 ನವೆಂಬರ್ 2021, 16:01 IST
Last Updated 13 ನವೆಂಬರ್ 2021, 16:01 IST
ಬಸವರಾಜ ಪಾಟೀಲ ಇಟಗಿ
ಬಸವರಾಜ ಪಾಟೀಲ ಇಟಗಿ   

ರಾಯಚೂರು: ಕೊಪ್ಪಳ ಹಾಗೂ ರಾಯಚೂರು ವ್ಯಾಪ್ತಿಯನ್ನು ಒಳಗೊಂಡು ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಸಂಚಲನ ಆರಂಭವಾಗಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳು ಪರೋಕ್ಷವಾಗಿ ವರಿಷ್ಠರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಆದರೆ, ಯಾವುದೇ ಪಕ್ಷವು ತನ್ನ ಅಭ್ಯರ್ಥಿಯನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ನವೆಂಬರ್‌ 16 ರಂದು ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ನವೆಂಬರ್‌ 23 ರೊಳಗಾಗಿ ನಾಮಪತ್ರ ಸಲ್ಲಿಕೆ ಆಗಬೇಕಿದೆ. ಜೆಡಿಎಸ್‌ ಸೇರಿದಂತೆ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ನಿರ್ಧರಿಸುವ ಕಾರ್ಯದಲ್ಲಿ ಮಗ್ನವಾಗಿವೆ.

ಪಕ್ಷಗಳ ಜಿಲ್ಲಾ ವರಿಷ್ಠರು ಬೆಂಗಳೂರಿಗೆ ತೆರಳಿದ್ದು, ದೂರವಾಣಿ ಸಂಪರ್ಕಕ್ಕೆ ಬರುತ್ತಿಲ್ಲ. ಮುಂದಿನ ವಾರ ಅಭ್ಯರ್ಥಿಗಳ ಘೋಷಣೆ ಮಾಡುವುದು ಪಕ್ಕಾ ಆಗಿದೆ. ಈ ಹಿಂದೆ 2016 ರಲ್ಲಿ ರಾಯಚೂರು–ಕೊಪ್ಪಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಬೆಂಬಲಿತ ಬಸವರಾಜ ಪಾಟೀಲ ಇಟಗಿ ಅವರು ಮರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಆದರೆ, ಕಾಂಗ್ರೆಸ್‌ ಪಕ್ಷದಲ್ಲಿಯೇ ಅತಿಹೆಚ್ಚು ಆಕಾಂಕ್ಷಿಗಳು ಟಿಕೆಟ್‌ಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಅವರ ಸಹೋದರನ ಪುತ್ರ ಶರಣಗೌಡ ಬಯ್ಯಾಪುರ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಹಾಗೂ ಕಾಂಗ್ರೆಸ್ ಮುಖಂಡ ಶರಣಗೌಡ ಮಲ್ಲದಕಲ್ಲ ಹಾಗೂ ಕಾಂಗ್ರೆಸ್ ರಾಯಚೂರು ನಗರ ಘಟಕದ ಅಧ್ಯಕ್ಷ ಬಿ.ಬಸವರಾಜ ರೆಡ್ಡಿ ಅವರ ಪೈಕಿ ಯಾರಿಗೇ ಟಿಕೆಟ್‌ ಸಿಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಬಿಜೆಪಿಯಿಂದ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಹಾಗೂ ಈಗಷ್ಟೇ ಪಕ್ಷ ಸೇರ್ಪಡೆಯಾದ ಉದ್ಯಮಿ ಈ.ಆಂಜನೇಯ ಅವರು ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಇಬ್ಬರು ಹೊರತಾಗಿ ಕೊಪ್ಪಳ ಜಿಲ್ಲೆಯಿಂದಲೂ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಟ್ಟು 6,506 ಮತದಾರರು: ರಾಯಚೂರು ಜಿಲ್ಲೆಯಲ್ಲಿ 174 ಗ್ರಾಮ ಪಂಚಾಯಿತಿಗಳು, ಐದು ಪಟ್ಟಣ ಪಂಚಾಯಿತಿಗಳು, ಐದು ಪುರಸಭೆಗಳು ಹಾಗೂ ಎರಡು ನಗರಸಭೆಗಳಿಗೆ ಒಟ್ಟು 3,408 ಜನಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಅವುಗಳಲ್ಲಿ 85 ಸ್ಥಾನಗಳು ಖಾಲಿ ಉಳಿದಿವೆ.

ಕೊಪ್ಪಳ ಜಿಲ್ಲೆಯ 153 ಗ್ರಾಮ ಪಂಚಾಯಿತಿಗಳು, ಒಂದು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಹಾಗೂ ಎರಡು ನಗರಸಭೆಗಳಿಗೆ ಒಟ್ಟು 2,757 ಜನಪ್ರತಿನಿಧಿಗಳು ಆಯ್ಕೆಯಾಗಿದ್ದು, ಎಲ್ಲರೂ ಮತದಾನ ಹಕ್ಕು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.