ADVERTISEMENT

ಮಾನ್ವಿ | ಜೋಳ ಖರೀದಿ ಕೇಂದ್ರಗಳ ಆರಂಭಕ್ಕೆ ಒತ್ತಾಯ: ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 7:20 IST
Last Updated 13 ಡಿಸೆಂಬರ್ 2025, 7:20 IST
ಮಾನ್ವಿಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿದರು
ಮಾನ್ವಿಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಅವರಿಗೆ ಮನವಿ ಸಲ್ಲಿಸಿದರು   

ಮಾನ್ವಿ: ಜೋಳ, ಭತ್ತ ಹಾಗೂ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ ಧರಣಿ ನಡೆಸಿದರು.

‘ಜೋಳ ಬೆಳೆದ ರೈತರ ಜಮೀನುಗಳ ಜಿ.ಪಿ.ಎಸ್ ಮಾಡಿ ಬೆಂಬಲ ಬೆಲೆ ಅಡಿಯಲ್ಲಿ ರೈತರಿಂದ ಜೋಳ ಖರೀದಿ ಮಾಡುವುದಕ್ಕೇ ಕೂಡಲೇ ನೋಂದಣಿ ಪ್ರಾರಂಭಿಸಬೇಕು. ತಾಲ್ಲೂಕಿನಲ್ಲಿ ರೈತರ ಅನುಕೂಲಕ್ಕೆ ತಕ್ಕಂತೆ ಜೋಳ, ಭತ್ತ, ತೊಗರಿ ಖರೀದಿಗೆ ಅಗತ್ಯ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು’ ಎಂದು ಆಗ್ರಹಿಸಿದರು.

‘ಖರೀದಿ ಕೇಂದ್ರಗಳಲ್ಲಿ ಹತ್ತಿ ಮಾರಾಟಕ್ಕೆ ಇರುವ ತೊಂದರೆಗಳನ್ನು ನಿವಾರಿಸಬೇಕು. ನೋಂದಣಿ ಸಮಸ್ಯೆ ಸರಿಪಡಿಸಬೇಕು. ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ದುರಸ್ತಿಗೊಳಿಸಬೇಕು. ಮಾನ್ವಿ ಪಟ್ಟಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಡೆಯುತ್ತಿದ್ದ ಜಾನುವಾರುಗಳ ಮಾರಾಟದ ಸಂತೆ ರದ್ದಾಗಿದ್ದು, ಕೂಡಲೇ ದನ ಮತ್ತು ಕುರಿ ಸಂತೆಯನ್ನು ಪ್ರಾರಂಭಿಸಬೇಕು’ ಎಂದು ಧರಣಿನಿರತರು ಒತ್ತಾಯಿಸಿದರು.

ADVERTISEMENT

ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಮನವಿ ಸ್ವೀಕರಿಸಿ ಮಾತನಾಡಿ,‘ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಹಾಗೂ ರೈತ ಸಂಘದ ಪ್ರತಿನಿಧಿಗಳ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ರಾಜ್ಯ ಉಪಾಧ್ಯಕ್ಷ ದೊಡ್ಡಬಸವನಗೌಡ ಬಲ್ಲಟಗಿ, ರಾಜ್ಯ ಕಾರ್ಯದರ್ಶಿಗಳಾದ ಯಂಕಪ್ಪ ಕಾರಬಾರಿ, ಇತರ ಪದಾಧಿಕಾರಿಗಳಾದ ಸೂಗುರಯ್ಯ ಆರ್.ಎಸ್.ಮಠ, ಬಸವರಾಜ ಮಾಲಿಪಾಟೀಲ, ಬಿ.ಲಿಂಗಾರೆಡ್ಡಿ ಪಾಟೀಲ, ಬೂದಯ್ಯಸ್ವಾಮಿ, ಸಿದ್ದಯ್ಯಸ್ವಾಮಿ ಗೋರ್ಕಲ್, ಮಲ್ಲಣ್ಣ ದಿನ್ನಿ, ಎಚ್.ಶಂಕ್ರಪ್ಪ ದೇವತಗಲ್, ದೇವರಾಜ ನಾಯಕ, ಅಮರೇಶ ಅಲ್ದಾಳ್, ಚಂದ್ರಶೇಖರ, ಹನುಮಂತ, ದೇವೆಂದ್ರಪ್ಪ, ಶಿವರಾಜ, ಚನ್ನಬಸವ ಗವಿಗಟ್ಟ, ಶರಣಪ್ಪ, ಬ್ರಹ್ಮಯ್ಯ, ನಬಿ ಸಾಬ್, ಹನುಮಂತ.ಎಂ ಧರಣಿಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.