
ಮಾನ್ವಿ: ರಾಜ್ಯ ಸರ್ಕಾರದ ಈ ವರ್ಷ ಬಜೆಟ್‌ನಲ್ಲಿ ದಶಕದ ಬೇಡಿಕೆಯಾದ ಇಲ್ಲಿನ ಪುರಸಭೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಮಂಜೂರಾತಿ ಸಿಗುವ ನಿರೀಕ್ಷೆ ಸ್ಥಳೀಯರಲ್ಲಿದೆ.
ಪೌರಾಡಳಿತ ನಿರ್ದೇಶನಾಲಯದ ಜಂಟಿ ನಿರ್ದೇಶಕರ ಸೂಚನೆ ಮೇರೆಗೆ ಕಳೆದ ವರ್ಷ ಸೆಪ್ಟೆಂಬರ್ 29ರಂದು ಸ್ಥಳೀಯ ಪುರಸಭೆಯ ಅಧಿಕಾರಿಗಳು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪೂರಕ ದಾಖಲೆಗಳೊಂದಿಗೆ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಅಧಿಕಾರಿಗಳು ಪ್ರಸ್ತಾವದಲ್ಲಿ ತಿಳಿಸಿರುವ ಪ್ರಕಾರ, ಈಗಿನ ಪುರಸಭೆಯ ವ್ಯಾಪ್ತಿ 17.70 ಚ.ಕಿಮೀ ವಿಸ್ತೀರ್ಣ, 2011ನೇ ಸಾಲಿನ ಜನಸಂಖ್ಯೆ 46,465 ಇದ್ದು ಪ್ರಸ್ತುತವಾಗಿ ಆನ್‌ಲೈನ್ ತಂತ್ರಾಂಶದ ಪ್ರಕಾರ ಅಂದಾಜು ಜನಸಂಖ್ಯೆ 58,719 ಹೆಚ್ಚಳಗೊಂಡಿದೆ. ಆರ್ಥಿಕ ಚಟುವಟಿಕೆಗಳು ಹಾಗೂ ಆದಾಯ ವೃದ್ಧಿ ಮತ್ತಿತರ ಅಂಶಗಳು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಪೂರಕವಾಗಿದ್ದು ಸರ್ಕಾರದಿಂದ ಬಜೆಟ್‌ನಲ್ಲಿ ಘೋಷಣೆಯಾಗುವ ಆಶಾಭಾವನೆ ಸ್ಥಳೀಯರಲ್ಲಿದೆ.
ಪಟ್ಟಣದಲ್ಲಿ ಸರ್ಕಿಟ್ ಹೌಸ್ ನಿರ್ಮಾಣ, ಡಿಪ್ಲೊಮಾ, ಎಂಜಿನಿಯರಿಂಗ್ ಹಾಗೂ ಮಹಿಳಾ ಪದವಿ ಕಾಲೇಜು, ಕೌಶಲ ತರಬೇತಿ ಕೇಂದ್ರ, ಮುಷ್ಟೂರು ಗ್ರಾಮದ ಹಳ್ಳಕ್ಕೆ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಮಂಜೂರಾತಿ ಸಿಗುವ ನಿರೀಕ್ಷೆ ಇದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಸ್ಥಳೀಯರಾಗಿರುವ ಕಾರಣ ಮಾನ್ವಿ ಪಟ್ಟಣಕ್ಕೆ ವಿಜ್ಞಾನ ಕೇಂದ್ರ ಮಂಜೂರಾಗುವ ಭರವಸೆ ಇದೆ ಎಂದು ಸ್ಥಳೀಯ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಠಾಣೆ: ಮಾನ್ವಿ ಪೊಲೀಸ್ ಠಾಣೆ ಹಿರೇಕೊಟ್ನೆಕಲ್ ಹೋಬಳಿ ಹಾಗೂ ಕುರ್ಡಿ ಹೋಬಳಿಗಳನ್ನು ಒಳಗೊಂಡ ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ತುಂಗಭದ್ರಾ ನದಿದಡದಿಂದ ಅಕ್ರಮವಾಗಿ ಮರಳು ಸಾಗಾಣಿಕೆಗೆ ಕಡಿವಾಣ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಳ್ಳಿಗಳ ಜನಸಂಖ್ಯೆಗೆ ಅನುಗುಣವಾಗಿ ಠಾಣೆಯಲ್ಲಿ ಸಿಬ್ಬಂದಿ ಇಲ್ಲ.
ಕುರ್ಡಿ ವ್ಯಾಪ್ತಿಗೆ ಪ್ರತ್ಯೇಕ ಪೊಲೀಸ್ ಠಾಣೆ ಮಂಜೂರು ಮಾಡಬೇಕಿದೆ. ರಾಜ್ಯ ಹೆದ್ದಾರಿಯಲ್ಲಿರುವ ಪೋತ್ನಾಳ ಪಟ್ಟಣಕ್ಕೆ ಬಸ್ ನಿಲ್ದಾಣ, ವಸತಿ ಶಾಲೆ ಹಾಗೂ ಸರ್ಕಾರಿ ಪದವಿ ಕಾಲೇಜು ಮಂಜೂರು ಮಾಡಬೇಕು ಎಂಬುದು ಗ್ರಾಮೀಣ ಜನರ ಪ್ರಮುಖ ಬೇಡಿಕೆಗಳಾಗಿವೆ.
ಸರ್ಕಾರಿ ಕಚೇರಿಗಳೇ ಇಲ್ಲ: ಮಾನ್ವಿ ವಿಧಾನಸಭಾ ಕ್ಷೇತ್ರ ಮಾನ್ವಿ ಹಾಗೂ ಸಿರವಾರ ತಾಲ್ಲೂಕುಗಳನ್ನು ಒಳಗೊಂಡಿದೆ.
2018ರಲ್ಲಿ ಹೊಸದಾಗಿ ರಚನೆಯಾದ ಮಸ್ಕಿ ಹಾಗೂ ಸಿರವಾರ ತಾಲ್ಲೂಕುಗಳಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ಕಾರಣ ಈ ಹೊಸ ತಾಲ್ಲೂಕುಗಳಿಗೆ ಸೇರ್ಪಡೆಯಾದ ಅನೇಕ ಹಳ್ಳಿಗಳು ಆಡಳಿತಾತ್ಮಕವಾಗಿ ಇನ್ನೂ ಮಾನ್ವಿ ತಾಲ್ಲೂಕಿನಲ್ಲಿ ಉಳಿದಿವೆ. ಹೊಸ ತಾಲ್ಲೂಕುಗಳಿಗೆ ಬಿಇಒ ಕಚೇರಿ, ಆರೋಗ್ಯ ಇಲಾಖೆ, ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಪ್ರಮುಖ ಕಚೇರಿಗಳ ಆರಂಭಕ್ಕೆ ಬಜೆಟ್ ನಲ್ಲಿ ಮಂಜೂರಾತಿ ದೊರಕುವ ಭರವಸೆ ಸ್ಥಳೀಯರಲ್ಲಿದೆ.
2009ರಲ್ಲಿ ತುಂಗಭದ್ರಾ ನೆರೆಹಾವಳಿಯಿಂದಾಗಿ ಸ್ಥಳಾಂತರಗೊಂಡಿದ್ದ ನದಿತೀರದ ಗ್ರಾಮಗಳ ಆಸರೆ ಕಾಲೊನಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಅನುದಾನ ಮಂಜೂರು ಮಾಡುವ ನಿರೀಕ್ಷೆ ಅಲ್ಲಿನ ನಿವಾಸಿಗಳಿಗೆ ಇದೆ.
ನೀರಾವರಿ ಯೋಜನೆ
ಬಲ್ಲಟಗಿ ಗ್ರಾಮದ ಸಮೀಪ ಬೃಹತ್ ಕೆರೆ ನಿರ್ಮಾಣ ಮಾಡಿ ನಾರಾಯಣಪುರ ಬಲದಂಡೆ ನಾಲೆಯ ಮೂಲಕ ನೀರು ಹರಿಸಿ ಕೆರೆ ಭರ್ತಿಗೊಳಿಸುವುದು ಹಾಗೂ ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ತುಂಗಭದ್ರಾ ಎಡದಂಡೆ ನಾಲೆಯ ನಂ.85 89 ಮತ್ತಿತರ ವಿತರಣಾ ಕಾಲುವೆಗಳ ಮೂಲಕ ಹರಿಸಿ ನಾಲೆಯ ಟೇಲೆಂಡ್ ಭಾಗದ ವ್ಯಾಪ್ತಿಯ ರೈತರ ಜಮೀನುಗಳಿಗೆ ತಲುಪಿಸುವ ಬೇಡಿಕೆ ಬಹು ದಿನಗಳಿಂದ ಇದೆ. ಇದು ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಎಂಬುದು ಈ ಭಾಗದ ರೈತರ ಬಹು ನಿರೀಕ್ಷಿತ ನೀರಾವರಿ ಯೋಜನೆಯಾಗಿದೆ. ಹತ್ತಿ ಮತ್ತು ಮೆಣಸಿನಕಾಯಿ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸುವ ಹಿತದೃಷ್ಟಿಯಿಂದ ತುಂಗಭದ್ರಾ ಎಡದಂಡೆ ನಾಲೆಯ ಮುಖ್ಯ ಕಾಲುವೆ ಹಾಗೂ ಉಪಕಾಲುವೆಗಳ ಹೂಳು ತೆಗೆದು ದುರಸ್ತಿಗೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ವಿಶೇಷ ಅನುದಾನ ಮಂಜೂರು ಮಾಡುವ ಬಗ್ಗೆ ಭರವಸೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ ಹಿರೇಕೊಟ್ನೆಕಲ್ ತಿಳಿಸಿದ್ದಾರೆ.
ಮಾನ್ವಿ ಹಾಗೂ ಸಿರವಾರ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ದೊರೆಯುವ ವಿಶ್ವಾಸ ಇದೆ–ಜಿ.ಹಂಪಯ್ಯ ನಾಯಕ, ಶಾಸಕ
ಮಾನ್ವಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಬಜೆಟ್‌ನಲ್ಲಿ ಘೋಷಿಸಲು ಸಚಿವ ಎನ್.ಎಸ್.ಬೋಸರಾಜು ಹಾಗೂ ಶಾಸಕ ಜಿ.ಹಂಪಯ್ಯ ನಾಯಕ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು–ಕೆ.ಎಂ.ಬಾಷಾ, ಸಾಮಾಜಿಕ ಕಾರ್ಯಕರ್ತ ಮಾನ್ವಿ
ರೈತರ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಪೋತ್ನಾಳ ಪಟ್ಟಣದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ವಿಸ್ತರಣಾ ಕೇಂದ್ರ ಆರಂಭಕ್ಕೆ ಸರ್ಕಾರ ಮಂಜೂರಾತಿ ನೀಡಬೇಕು–ದುರುಗಪ್ಪ ತಡಕಲ್, ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.