
ಮಾನ್ವಿ ತಾಲ್ಲೂಕಿನ ಮದ್ಲಾಪುರ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಚರ್ಚಿಸಿದರು
ಮಾನ್ವಿ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ವಿಷಯವನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪರೀಕ್ಷೆ ಸಮೀಪಿಸುತ್ತಿರುವ ಕಾರಣ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಬೆಳ್ಳಂಬೆಳಿಗ್ಗೆ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ಕೆಲ ದಿನಗಳ ಹಿಂದೆ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ಚರ್ಚೆ ನಡೆಸಿ ರಾತ್ರಿ ಅಲ್ಲಿಯೇ ತಂಗಿದ್ದ ಅವರು, ಒಂದು ವಾರದಿಂದ ಹಳ್ಳಿಗಳಿಗೆ ತೆರಳಿ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ಕಾರ್ಯ ಆರಂಭಿಸಿದ್ದಾರೆ.
ಶನಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ತಾಲ್ಲೂಕಿನ ಮದ್ಲಾಪುರ, ರಬ್ಬಣಕಲ್ ಹಾಗೂ ಕಾತರಕಿ ಗ್ರಾಮಗಳಿಗೆ ದಿಢೀರನೆ ಭೇಟಿ ನೀಡಿದ ಅವರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗಪ್ಪ, ಸಹ ಶಿಕ್ಷಕ ದೇವಪ್ಪ, ಸಿಆರ್‌ಪಿ ಕಾಶಿನಾಥ, ಸಂಪನ್ಮೂಲ ವ್ಯಕ್ತಿ ಮಹಿಬೂಬ್ ಮದ್ಲಾಪುರ ಅವರ ಜೊತೆಗೆ 10ನೇ ತರಗತಿಯ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿದರು.
ತಹಶೀಲ್ದಾರ್ ಭೀಮರಾಯ ಅವರು ದಿಢೀರನೆ ಮನೆ ಮುಂದೆ ಬಂದು ನಿಲ್ಲುತಿದ್ದಂತೆ ಪಾಲಕರು ಗಾಬರಿಗೊಂಡ ಘಟನೆ ನಡೆಯಿತು. ಮುಖ್ಯಶಿಕ್ಷಕ ನಾಗಪ್ಪ ಭೇಟಿಯ ಕಾರಣ ವಿವರಿಸಿದ ನಂತರ, ಪಾಲಕರು ಹರ್ಷದಿಂದ ಮನೆಯೊಳಗೆ ಬರಮಾಡಿಕೊಂಡರು.
ತಹಶೀಲ್ದಾರ್ ತೆರಳುವ ಹೊತ್ತಿಗೆ, ಕೆಲವು ಮನೆಗಳಲ್ಲಿ ವಿದ್ಯಾರ್ಥಿಗಳು ಬೆಳಗಿನ ಜಾವ ಬೇಗನೆ ಎದ್ದು ಓದುವುದರಲ್ಲಿ ನಿರತರಾ ಗಿರುವುದು ಕಂಡು ಬಂದಿತು. ನಂತರ ತಹಶೀಲ್ದಾರ್ ಭೀಮ ರಾಯ ಅವರು ಹಳಗನ್ನಡ ಪದ್ಯ ಸೇರಿದಂತೆ ಪಠ್ಯಕ್ಕೆ ಸಂಬಂಧಿಸಿದ ಇತರ ವಿಷಯಗಳ ಪ್ರಶ್ನೆಗಳನ್ನು ವಿದ್ಯಾರ್ಥಿಗಳಿಗೆ ಕೇಳಿ ಉತ್ತರಗಳನ್ನು ಪಡೆದುಕೊಂಡರು.
ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಪಡೆದ ಅಂಕಗಳು, ವಾರ್ಷಿಕ ಪರೀಕ್ಷೆಗೆ ಸಿದ್ಧತೆ, ಪ್ರತಿ ದಿನ ಅಭ್ಯಾಸಕ್ಕೆ ಮೀಸಲಿಟ್ಟ ಅವಧಿ ಬಗ್ಗೆ ಮಾಹಿತಿ ಪಡೆದು, ಅವರೊಂದಿಗೆ ಚರ್ಚಿಸಿದರು.
ನೋಟ್ ಪುಸ್ತಕಗಳನ್ನು ಪರಿಶೀಲಿಸಿದರು.
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ 40 ಅಂಕ ಗಳಿಸಿ ಪಾಸಾಗುವಂತೆ ಮಾಡಲು ಕಲ್ಯಾಣ ಕರ್ನಾಟಕ ಭಾಗದಿಂದ ಮೊದಲಿಗೆ ಜಾರಿಗೊಳಿಸಿರುವ ಮಿಷನ್ 40 ಪ್ಲಸ್ ಯೋಜನೆಯ ಸರಳ ಮಾದರಿ ಪ್ರಶ್ನೆಪತ್ರಿಕೆಗಳ ಅನುಷ್ಠಾನದ ಬಗ್ಗೆ ಅವರು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.
ವಿದ್ಯಾರ್ಥಿಗಳ ಮನೆ ಭೇಟಿಯ ನಂತರ, ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿಶೇಷ ಬೋಧನಾ ತರಗತಿ ನಡೆಸಲು ಮುಖ್ಯಶಿಕ್ಷಕ ನಾಗಪ್ಪ ಅವರಿಗೆ ಸೂಚನೆ ನೀಡಿದರು.
ವಿದ್ಯಾರ್ಥಿಗಳ ಮನೆ ಭೇಟಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ,‘ತಾಲ್ಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆ, ವಿದ್ಯಾರ್ಥಿಗಳು ಅನುಸರಿಸಬೇಕಾದ ಪರೀಕ್ಷಾ ಸಿದ್ಧತಾ ವಿಧಾನಗಳ ಬಗ್ಗೆ ಮತ್ತು ಪಾಲಕರಿಗೆ ಶಿಕ್ಷಣದ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿದ್ದೇನೆ’ ಎಂದು ಅವರು ತಿಳಿಸಿದರು.
ಮದ್ಲಾಪುರ ಗ್ರಾಮದ ಟಿನ್ ಶೆಡ್ ಮನೆಯೊಂದರಲ್ಲಿ ಪದ್ಮಾವತಿ ಎನ್ನುವ ಬಡ ಪ್ರತಿಭಾವಂತ ವಿದ್ಯಾರ್ಥಿನಿ ಬೆಳಗಿನ ಜಾವ ಇರುವ ಒಂದೇ ವಿದ್ಯುದ್ದೀಪದ ಬೆಳಕಿನಲ್ಲಿ ಓದಿನಲ್ಲಿ ತೊಡಗಿರುವುದನ್ನು ನೋಡಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಅಚ್ಚರಿಗೊಂಡರು.
‘ಪರೀಕ್ಷೆಯಲ್ಲಿ ಟಾಪರ್ ಆಗುವ ಗುರಿ ಇದೆ. ಎರಡು ತಿಂಗಳಿಂದ ಖುದ್ದು ನಾನೇ ವಿಷಯವಾರು ವೇಳಾಪಟ್ಟಿ ಮಾಡಿಕೊಂಡು ಪ್ರತಿ ದಿನ ಅಭ್ಯಾಸ ಮಾಡುತ್ತಿದ್ದೇನೆ’ ಎಂದು ಹೇಳುತ್ತಾ ವಿದ್ಯಾರ್ಥಿನಿ ಪದ್ಮಾವತಿ ವೇಳಾಪಟ್ಟಿಯನ್ನು ತೋರಿಸುತ್ತಿದ್ದಂತೆ, ತಹಶೀಲ್ದಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ‘ವಿದ್ಯಾರ್ಥಿನಿ ಪದ್ಮಾವತಿ ಓದಿನಲ್ಲಿ ತುಂಬಾ ಜಾಣೆಯಾಗಿದ್ದಾಳೆ. ಇಂದು ಸಂಜೆಯೇ ಅವಳ ಓದಿಗೆ ಅನುಕೂಲವಾಗಲು ಕುರ್ಚಿ, ಮೇಜು ಹಾಗೂ ಸೋಲಾರ್ ವಿದ್ಯುದ್ದೀಪ ಕಳುಹಿಸಿಕೊಡುವೆ’ ಎಂದು ಪಾಲಕರಿಗೆ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.