ADVERTISEMENT

ಮಸ್ಕಿ: ಕಾಂಗ್ರೆಸ್ ಮನೆ ಸೇರುವುದು ಖಚಿತ-ಬಿ.ವೈ.ವಿಜಯೇಂದ್ರ

ಬಿಜೆಪಿ ಬೂತ್ ಮಟ್ಟದ ಅಧ್ಯಕ್ಷರ ಸಮಾವೇಶದಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 10:41 IST
Last Updated 4 ಏಪ್ರಿಲ್ 2021, 10:41 IST
ಮಸ್ಕಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬೂತ್ ಮಟ್ಟದ ಅಧ್ಯಕ್ಷರ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು
ಮಸ್ಕಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬೂತ್ ಮಟ್ಟದ ಅಧ್ಯಕ್ಷರ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದರು   

ಮಸ್ಕಿ: ‘ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸಿ ಗೆಲುವಿನ ಹಗಲು ಗನಸು ಕಾಣುತ್ತಿರುವ ಕಾಂಗ್ರೆಸ್ ಮತ ಎಣಿಕೆಯ ದಿನ ಅರ್ಧ ಗಂಟೆಯಲ್ಲಿ ಮನೆ ಸೇರುವುದು ಖಚಿತ‘ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಬೂತ್ ಅಧ್ಯಕ್ಷರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಮುಖಂಡರಿಗೆ ಮಾತನಾಡಲು ಯಾವುದೇ ವಿಷಯ ವಿಲ್ಲ. ನನ್ನ ಬಗ್ಗೆ ಅಪಪ್ರಚಾರ ಮಾಡುವುದು ಬಿಟ್ಟರೆ ಅವರಿಗೆ ಏನು ಗೊತ್ತಿಲ್ಲ‘ ಎಂದರು.

ರಾಜ್ಯದಲ್ಲಿ ಜನಪ್ರಿಯ ಮುಖ್ಯಮಂತ್ರಿ ಎಂಬ ಹೆಸರು ಯಾರಿಗಾದರೂ ಇದ್ದರೆ ಅದು ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತ್ರ. ಅವರು ಅಧಿಕಾರದಲ್ಲಿ ಇರಲಿ, ಇರದೇ ಇರಲಿ ಸದಾ ಜನರ ಸೇವೆಗಾಗಿ ಮಿಡಿಯುವ ಹೃದಯ ಎಂದರು.

ADVERTISEMENT

ಶಿರಾ ಹಾಗೂ ಆರ್.ಆರ್.ನಗರದಲ್ಲಿ ಬಿಜೆಪಿ ಬರೋದಿಲ್ಲ ಎಂದು ಕಾಂಗ್ರೆಸ್‌ನವರು ಏನೆಲ್ಲಾ ಅಪಪ್ರಚಾರ ಮಾಡಿದರು. ಆದರೆ, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಬಹುಮತದಿಂದ ಗೆಲವು ಸಾಧಿಸಿತು. ಇದೀಗ ಮಸ್ಕಿ ಉಪ ಚುನಾವಣೆಯಲ್ಲೂ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ನವರಿಗೂ ನೆನಪು ಇಟ್ಟುಕೊಳ್ಳುವಂತಹ ಫಲಿತಾಂಶ ಕೊಡುತ್ತೇವೆ ಎಂದರು.

ಸಚಿವ ಬಿ.ಶ್ರೀರಾಮುಲು ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಪ್ರತಾಪಗೌಡ ಪಾಟೀಲ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಫಲವಾಗಿ ಈ ಉಪ ಚುನಾವಣೆ ಬಂದಿದೆ. ಬೂತ್ ಅಧ್ಯಕ್ಷರಿಗೆ ನಾಮಫಲಕ ನೀಡುವ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರೆ ಅದು ಬಿಜೆಪಿಯಿಂದ ಮಾತ್ರ ಸಾದ್ಯ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರ ಬಾಯಿಗೆ ಲಗಾಮು ಇಲ್ಲದಂತೆ ಕ್ಷೇತ್ರದಲ್ಲಿ ಮಾತನಾಡುತ್ತಿದ್ದಾರೆ. ಉಪ ಚುನಾವಣೆ ನಡೆದ 17 ಕ್ಷೇತ್ರಗಳಲ್ಲಿಯೂ ಇದೇ ರೀತಿ ಮಾತನಾಡಿದರು. ಆದರೆ, ಎಲ್ಲಾ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಮುಣ್ಣು ಮುಕ್ಕಿದೆ. ಅದೇ ರೀತಿ ಮಸ್ಕಿ ಕ್ಷೇತ್ರದಲ್ಲೂ ಕಾಂಗ್ರೆಸ್ ಮುಣ್ಣು ಮುಕ್ಕುವುದರಲ್ಲಿ ಯಾವುದೇ ಅನುಮಾನ ಇಲ್ಲ. ವಿಜಯೇಂದ್ರ ಬಂದ ತಕ್ಷಣ ಸೋಲುತಿವಿ ಎಂಬ ಭೀತಿಯಿಂದ ಕಾಂಗ್ರೆಸ್ ಸಣ್ಣತನ ಕೆಲಸ ಮಾಡುತ್ತಿದೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಹೆಸರೇ ಇಲ್ಲದಂತಾಗುತ್ತದೆ ಎಂದರು.

5 ಕಾಲುವೆ ಯೋಜನೆ ಬಗ್ಗೆ ಅಧಿಕಾರಿಗಳು ಗೊಂದಲ ಸೃಷ್ಟಿ ಮಾಡಿದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ಸರ್ಕಾರ ಇರುವುದರಿಂದ ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.

ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ, ಸಂಸದರಾದ ಕರಡಿ ಸಂಗಣ್ಣ, ರಾಜಾ ಅಮರೇಶ್ವರ ನಾಯಕ, ಶಾಸಕರಾದ ರಾಜುಗೌಡ, ಪರಣ್ಣ ಮನವಳ್ಳಿ, ಬಸವರಾಜ ದಡೇಸೂಗೂರು,ಡಾ. ಶಿವರಾಜ ಪಾಟೀಲ, ಹಾಲಪ್ಪ ಆಚಾರ್, ಹನುಮ ಸಿದ್ದೇಶ ಯಾದವ್, ಭಾರತಿ ಶೆಟ್ಟಿ, ವಿದ್ಯುತ್ ಕಾರ್ಖನೆ ನಿಗಮದ ಅದ್ಯಕ್ಷ ತಮ್ಮೇಶಗೌಡ, ಜಿಲ್ಲಾ ಪಂಚಾಯತಿ ಅದ್ಯಕ್ಷೆ, ಹಾದಿಮನಿ ವೀರಲಕ್ಷ್ಮಿ, ಪಕ್ಷದ ಜಿಲ್ಲಾ ಘಟಕದ ಅದ್ಯಕ್ಷ ರಾಮಾನಂದ ಯಾದವ್, ಹನುಮನಗೌಡ ಬೇಳಗುರ್ಕಿ,‌ ಮಾಜಿ ಶಾಸಕ‌ ನೇಮಿರಾಜ ನಾಯ್ಕ, ಮಂಡಲ ಅದ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.