ADVERTISEMENT

ಮಸ್ಕಿ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಪರ ಹಣ ಹಂಚಿಕೆ, ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 12:28 IST
Last Updated 14 ಏಪ್ರಿಲ್ 2021, 12:28 IST
ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಹಾಸನ ಮೂಲದ ಬಿಜೆಪಿ ಕಾರ್ಯಕರ್ತರು ಜನರಿಗೆ ಹಣ ಹಂಚುವಾಗ ಕಾಂಗ್ರೆಸ್‌ ಕಾರ್ಯಕರ್ತರು ಅವರನ್ನು ತಡೆದಿರುವುದು
ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ಹಾಸನ ಮೂಲದ ಬಿಜೆಪಿ ಕಾರ್ಯಕರ್ತರು ಜನರಿಗೆ ಹಣ ಹಂಚುವಾಗ ಕಾಂಗ್ರೆಸ್‌ ಕಾರ್ಯಕರ್ತರು ಅವರನ್ನು ತಡೆದಿರುವುದು   

ತುರ್ವಿಹಾಳ (ರಾಯಚೂರು ಜಿಲ್ಲೆ): ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರಿಗೆ ಮತ ಹಾಕುವಂತೆ ಮನೆ-ಮನೆಗೆ ತೆರಳಿ ಮನವಿ ಮಾಡುತ್ತಾ, ಬಹಿರಂಗವಾಗಿ ಜನರಿಗೆ ಹಣ ಹಂಚುತ್ತಿದ್ದ ಮೂವರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ತುರ್ವಿಹಾಳ ಪಟ್ಟಣದ ಶ್ರೀನಿವಾಸ ಕ್ಯಾಂಪ್ ರಸ್ತೆಯ ಪಕ್ಕದಲ್ಲಿರುವ ವಾರ್ಡ್‌-1 ಮತ್ತು 3ರಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾಗ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಇದೇ ವೇಳೆ ಸ್ಥಳಕ್ಕೆ ಧಾವಿಸಿದ ಚುನಾವಣೆ ಜಾಗೃತ ದಳದ ಅಧಿಕಾರಿ ಎಂ.ಭೀರಪ್ಪ ಅವರ ತಂಡ ಹಾಸನ ಮೂಲದ ಬಿಜೆಪಿ ಕಾರ್ಯಕರ್ತರಾದ ನವೀನ್, ಸಚಿನ್ ಮತ್ತು ಆನಂದ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬಂಧಿತ ಆರೋಪಿಗಳಿಂದ ಅಧಿಕಾರಿಗಳು ಐದು ನೂರು ಮುಖ ಬೆಲೆಯ ₹ 81 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಎರಿಯಪ್ಪ ಅಂಗಡಿ ತಿಳಿಸಿದ್ದಾರೆ

‘ಜನರು ತಮ್ಮ ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲು ನಿರ್ಧರಿಸಿದ್ದಾರೆ. ಅವರನ್ನು ಬಿಜೆಪಿ ಅಭ್ಯರ್ಥಿ ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ‘ ಎಂದು ಮಸ್ಕಿ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ (ಹಿಂದುಳಿದ ವರ್ಗ) ಬಾಪೂಗೌಡ ದೇವರಮನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.