
ಮಸ್ಕಿ: ‘ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರ ಸಲಹೆ ಮತ್ತು ಸಹಕಾರ ಅತ್ಯಗತ್ಯ’ ಎಂದು ಪುರಸಭೆ ಅಧ್ಯಕ್ಷ ಸುರೇಶ ಹರಸೂರು ಮನವಿ ಮಾಡಿದರು.
ಬಜೆಟ್ ಹಿನ್ನೆಲೆಯಲ್ಲಿ ಬುಧವಾರ ಪುರಸಭೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಈ ಬಾರಿ ಜನರಿಗೆ ಹೆಚ್ಚಿನ ಭಾರವಾಗದಂತೆ ಸಮತೋಲನದ ಬಜೆಟ್ ರೂಪಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಪಟ್ಟಣದ ಮೂಲಸೌಲಭ್ಯಗಳ ಅಭಿವೃದ್ಧಿ, ಸ್ವಚ್ಛತೆ, ಕುಡಿಯುವ ನೀರು, ರಸ್ತೆ ಹಾಗೂ ನಗರ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.
ಪುರಸಭೆ ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಚೇತನ ಪಾಟೀಲ, ಮುಖ್ಯಾಧಿಕಾರಿ ನರಸರೆಡ್ಡಿ ಹಾಗೂ ಶಿವಣ್ಣ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪಾಲ್ಗೊಂಡ ನಾಗರಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದರು.
ಒಳಚರಂಡಿ ವ್ಯವಸ್ಥೆ ಸುಧಾರಣೆ, ರಸ್ತೆ ದುರಸ್ತಿ, ಸಾರ್ವಜನಿಕ ಸೌಲಭ್ಯಗಳ ವಿಸ್ತರಣೆ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಯಿತು. ಸದಸ್ಯರು ಹಾಗೂ ಅನೇಕ ಮುಖಂಡರು ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿ ಯೋಜನೆಗಳಿಗೆ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.