ADVERTISEMENT

ಕೆಳಭಾಗದ ರೈತರ ಜಮೀನಿಗೆ ಶೀಘ್ರದಲ್ಲೇ ನೀರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 14:51 IST
Last Updated 16 ಆಗಸ್ಟ್ 2021, 14:51 IST
ವಿ.ಸೋಮಣ್ಣ
ವಿ.ಸೋಮಣ್ಣ   

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಕೆಳಭಾಗದ ರೈತರ ಬಹುದಿನದ ಬೇಡಿಕೆಯನ್ನು ಆದಷ್ಟು ಬೇಗನೆ ಈಡೇರಿಸಿ ಸಮಗ್ರ ನೀರು ಹರಿಸುವ ಚಿಂತನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಯ ಉಸ್ತುವಾರಿ ಸಚಿವರು, ಸಂಸದರು ಸೇರಿ ಮುಖ್ಯಮಂತ್ರಿ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಶೀಘ್ರದಲ್ಲೇ ಕೆಳಭಾಗದ ರೈತರಿಗೆ ಕಾನೂನು ಚೌಕಟ್ಟಿನಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಎಡದಂಡೆ ನಾಲೆ ನೀರು ನಿರ್ವಹಣಾ ಅಧಿಕಾರಿಗಳ ಜೊತೆ ಚರ್ಚಿಸಿ ಸಂಬಂಧಿಸಿದ ಸಚಿವರನ್ನು ಒಳಗೊಂಡಂತೆ ಸಭೆಗೆ ಕರೆದು ಕೆಳಭಾಗದ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಕಾನೂನು ಚೌಕಟ್ಟಿನಲ್ಲಿ ಯಾವ ಜಿಲ್ಲೆಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎನ್ನುವ ವಿಚಾರವನ್ನು ಐ.ಸಿ.ಸಿ ಸಭೆ ಗಮನಕ್ಕೆ ತಂದು ರೈತರ ನೀರು ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಈ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಅಕ್ರಮ ನೀರಾವರಿ ಬಳಕೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಸೂಚನೆ ನೀಡಿದರು.

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕಾಲುವೆ ಕೊನೆ ಭಾಗದ ರೈತರ ಸಮಸ್ಯೆ ಮನವರಿಕೆ ಮಾಡಿದರು.

ಶಾಸಕರಾದ ವೆಂಕಟರಾವ್ ನಾಡಗೌಡ, ಡಾ.ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಮಾಜಿ ವಿಧಾನ ಪರಿಷತ್ ಸದಸ್ಯ ಎನ್‌. ಶಂಕ್ರಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.