ADVERTISEMENT

20 ವರ್ಷಗಳ ಹಿಂದಿನ ವಿಷಯ ಕೆದಕಿ ರಾಜಕೀಯ: ಸಂಸದ ಕುಮಾರ ನಾಯಕ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 0:23 IST
Last Updated 27 ಫೆಬ್ರುವರಿ 2025, 0:23 IST
ಜಿ.ಕುಮಾರ ನಾಯಕ
ಜಿ.ಕುಮಾರ ನಾಯಕ   

ರಾಯಚೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರ ರೂಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿಯಮಾನುಸಾರ ನಿವೇಶನ ಹಂಚಿಕೆ ಮಾಡಿದ ವಿಷಯವನ್ನು 20 ವರ್ಷಗಳ ನಂತರ ಕೆದಕಿ ರಾಜಕೀಯ ಮಾಡಲಾಗುತ್ತಿದೆ’ ಎಂದು ರಾಯಚೂರು ಸಂಸದ ಜಿ.ಕುಮಾರ ನಾಯಕ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

‘ಭೂ ಮಾಲೀಕರು ಭೂಮಿ ಕಳೆದುಕೊಂಡ ನಂತರ ಪರಿಹಾರ ಒದಗಿಸಿದ್ದೇ ಈಗ ಸಮಸ್ಯೆಯಾಗಿದೆ. ವಾಸ್ತವದಲ್ಲಿ ಇದು ಸಮಸ್ಯೆಯೇ ಅಲ್ಲ. ಈ ಪ್ರಕರಣದಲ್ಲಿ ಡಿನೋಟಿಫಿಕೇಶನ್‌ನ ಹೊರತಾಗಿಯೂ ಮುಡಾ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಸೈಟ್‌ಗಳನ್ನೂ ನಿರ್ಮಾಣ ಮಾಡಿದೆ’ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಭೂಮಾಲೀಕ ತನ್ನ ಭೂಮಿಯನ್ನು ಕಳೆದುಕೊಂಡಿದ್ದರಿಂದ ಮುಡಾ 50:50 ನಿಯಮದ ಮೇಲೆ ಪರಿಹಾರವನ್ನು ನೀಡಿದೆ. ಭೂ ಪರಭಾರೆಯು ನಿಯಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2005ರಲ್ಲಿ ಪರಿಹಾರ ನೀಡದ ಕಾರಣ ನಿವೇಶನ ಹಂಚಿಕೆ ಮಾಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಡಿನೋಟಿಫಿಕೇಷನ್‌ ಬ್ರಹ್ಮ ಬರೆದ ವಾಕ್ಯ ಅಲ್ಲ. ಅದನ್ನು ಯಾವಾಗ ಬೇಕಾದರೂ ರದ್ದುಪಡಿಸುವ ಅಧಿಕಾರ ಸರ್ಕಾರಕ್ಕೆ ಇದೆ. ರೈತರು ಎಷ್ಟು ಎಕರೆ ಜಮೀನು ಕಳೆದುಕೊಂಡಿರುತ್ತಾರೆಯೋ, ಅದಕ್ಕೆ ಅನುಗುಣವಾಗಿ ನಿವೇಶನಗಳನ್ನೂ ಪಡೆಯುತ್ತಾರೆ. ಇದು ಕರ್ನಾಟಕ ಅಷ್ಟೇ ಅಲ್ಲ ದೇಶದ ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ನಿಯಮವಾಗಿದೆ’ ಎಂದು ತಿಳಿಸಿದರು.

‘ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯನ್ನು ನೋಡಿರುವೆ. ಲೋಕಾಯುಕ್ತ ಕಚೇರಿಯಿಂದ ವರದಿ ಅಥವಾ ಯಾವುದೇ ರೀತಿಯ ಪತ್ರ ನನ್ನ ಕೈಸೇರಿಲ್ಲ. ಅದು ನನ್ನ ಕೈಸೇರಿದ ಮೇಲೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಲೋಕಾಯುಕ್ತಕ್ಕೆ ಉತ್ತರ ಕೊಡುವೆ’ ಎಂದು ಹೇಳಿದರು.

ನನ್ನನ್ನು ರಾಯಚೂರು ಜಿಲ್ಲೆಯ ಜನ ಆಯ್ಕೆ ಮಾಡಿದ್ದಾರೆ. ಇಲ್ಲಿಯ ಜನರಿಗೆ ದ್ರೋಹ ಬಗೆದಿಲ್ಲ. ಹೀಗಾಗಿ ರಾಜೀನಾಮೆ ಕೊಡುವ ಪ್ರಶ್ನೆಯೂ ಉದ್ಭವಿಸುವುದಿಲ್ಲ.
–ಜಿ. ಕುಮಾರ ನಾಯಕ, ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.