ADVERTISEMENT

ಹದಗೆಟ್ಟ ರಸ್ತೆಯಿಂದ ಗಲಗ, ಮುಂಡರಗಿ, ದೇವತಗಲ್‌, ಗಣಜಲಿ ಗ್ರಾಮಸ್ಥರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 8:20 IST
Last Updated 28 ಸೆಪ್ಟೆಂಬರ್ 2020, 8:20 IST
ಜಾಲಹಳ್ಳಿ ಸಮೀಪದ ಮುಂಡರಗಿ ಗ್ರಾಮದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿರುವುದು
ಜಾಲಹಳ್ಳಿ ಸಮೀಪದ ಮುಂಡರಗಿ ಗ್ರಾಮದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿರುವುದು   

ಜಾಲಹಳ್ಳಿ: ಸಮೀಪದ ಮುಂಡರಗಿ ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗಿದೆ.

ಮಳೆಯಿಂದಾಗಿ ರಸ್ತೆ ಹದಗೆಟ್ಟು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ರಸ್ತೆ ತುಂಬಾ ಕಿರಿದಾಗಿದ್ದು, ದೊಡ್ಡ ವಾಹನಗಳ ಸಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಕಳೆದ 3 ವರ್ಷಗಳ ಹಿಂದೆ ಅಮರಪುರ ಕ್ರಾಸ್‌–ಚಿಂಚರಕಿ ಕ್ರಾಸ್‌ವರೆಗೆ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸುಮಾರು ₹ 44 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಚಿಂಚರಕಿ ಕ್ರಾಸ್‌ ನಿಂದ ಗಲಗ ಗ್ರಾಮದವರೆಗೆ 8 ಕಿ.ಮೀ ಮಾತ್ರ ನಿರ್ಮಿಸಲಾಗಿದೆ. ಉಳಿದ 14 ಕಿ.ಮೀ ಕಾಮಗಾರಿಯನ್ನು ಕೇಂದ್ರದ ಪರಿಹಾರ ನಿಧಿಯಲ್ಲಿ ನಿರ್ಮಿಸಲು ಮಂಜೂರಾತಿ ಸಿಕ್ಕಿದೆ ಎಂಬ ಕಾರಣ ಹೇಳಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಕೂಡಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಗಲಗ, ಮುಂಡರಗಿ, ದೇವತಗಲ್‌, ಗಣಜಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ADVERTISEMENT

ಮುಂಡರಗಿ ಶಿವರಾಯ ದೇವಸ್ಥಾನಕ್ಕೆ ತೆರಳಲು ಜನರು ಇದೇ ರಸ್ತೆಯನ್ನು ಅವಲಂಬಿಸಿರುವುದರಿಂದ ಜನ ಪರದಾಡುವಂತಾಗಿದೆ. ಇದಲ್ಲದೆ, ರಸ್ತೆಯ ಪಕ್ಕದಲ್ಲಿರುವ ಮನೆಯವರು ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ರಸ್ತೆ ತುಂಬಾ ಕಿರಿದಾಗಿದೆ.ಇದರಿಂದಾಗಿ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ.

ರಸ್ತೆಯ ಮೇಲೆಯೇ ಹೊಲಸು ನೀರು ಹರಿಬಿಡುವುದರಿಂದ ನಿತ್ಯ ಅಪಘಾತಗಳು ನಡೆಯುತ್ತಿವೆ. ಸಂಬಂಧಿಸಿದ ಅಧಿಕಾರಿಗಳ ತಕ್ಷಣವೇ ಈ ರಸ್ತೆಯ ಪರಿಶೀಲಿಸಬೇಕೆಂದು ಗಲಗ ಗ್ರಾಮದ ನಾಗರಿಕರು ಒತ್ತಾಯಿಸಿದ್ದಾರೆ.

ಕ್ಷೇತ್ರದ ಶಾಸಕ ಕೆ.ಶಿವನಗೌಡ ನಾಯಕ ಅವರೇ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು, ಕ್ಷೇತ್ರದಲ್ಲಿ ರಸ್ತೆಗಳ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಸ್ತೆ ದುರಸ್ತಿ ಬಗ್ಗೆ ಲೋಕೋಪಯೋಗಿ ಇಲಾಖೆ ಎಂಜನಿಯರ್‌ ಉಮಾಪತಿ ಅವರನ್ನು ’ಪ್ರಜಾವಾಣಿ‘ ದೂರವಾಣಿ ಮೂಲಕ ಸಂಪರ್ಕಿಸಿದರೆ, ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.