ADVERTISEMENT

ಮಟ್ಕಾ, ಇಸ್ಪೀಟ್ ದಂಧೆಗೆ ಕಡಿವಾಣ ಇಲ್ಲ!

ಬಿಗಿಕ್ರಮಕ್ಕೆ ಮುಂದಾಗದ ತುರ್ವಿಹಾಳ ಠಾಣೆ ಪೊಲೀಸರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 13:26 IST
Last Updated 21 ಜನವರಿ 2021, 13:26 IST

ಸಿಂಧನೂರು:ತಾಲ್ಲೂಕಿನ ಗಾಂಧಿನಗರ ಗ್ರಾಮದಲ್ಲಿ ಮಟ್ಕಾ ಮತ್ತು ಇಸ್ಪೀಟ್ ಜೂಜಾಟ ದಂಧೆ ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ಅಹವಾಲು ಸಲ್ಲಿಸುತ್ತಾ ಬಂದಿದ್ದರೂ, ತುರ್ವಿಹಾಳ ಠಾಣೆಯ ಪೊಲೀಸರು ಸಂಪೂರ್ಣ ಕಡಿವಾಣ ಹಾಕುವುದಕ್ಕೆ ಮುಂದಾಗುತ್ತಿಲ್ಲ.

ತಾಲ್ಲೂಕು ಕೇಂದ್ರದಿಂದ 16 ಕಿಲೋ ಮೀಟರ್‌ ದೂರದಲ್ಲಿರುವ ಗಾಂಧಿನಗರವು ಸಂಪದ್ಭರಿತ ಗ್ರಾಮ. ಇದರಿಂದ 100 ಮೀಟರ್ ಅಂತರದಲ್ಲಿರುವ ಜಂಬನಾಥನಹಳ್ಳಿಯ ಕೆರೆ ಪಕ್ಕದಲ್ಲಿ ಹಲವು ತಿಂಗಳುಗಳಿಂದ ಇಸ್ಪೀಟ್ ಜೂಜಾಟ ನಡೆಯುತ್ತಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ನೂರಾರು ಜನರು ಜೂಜಾಟ ಆಡುವುದಕ್ಕಾಗಿಯೇ ಬರುತ್ತಿದ್ದಾರೆ. ಪ್ರತಿನಿತ್ಯ ಕೋಟಿಗಟ್ಟಲೆ ಹಣವು ವಿನಿಮಯ ಆಗುತ್ತಿದೆ.

ಇಸ್ಪೀಟ್ ಜೂಜಾಟದಿಂದ ಸ್ಥಳೀಯರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಓಪನ್ ಮತ್ತು ಕ್ಲೋಸ್‍ನ ನಂಬರ್‌ ಮೂಲಕ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವ ಮಟ್ಕಾ ದಂಧೆಯ ಹೆಟೈಕ್ ಬುಕ್ಕಿಗಳು ಬೇರೂರಿದ್ದಾರೆ. ಕಲ್ಯಾಣಿ ಡೇ ಮತ್ತು ಕಲ್ಯಾಣಿ ನೈಟ್ ಮೂಲಕ ಹಗಲು-ರಾತ್ರಿ, ಮಿಲನ್ ಡೇ ಮತ್ತು ಮಿಲನ್ ನೈಟ್ ಬೆಳಗಿನ ಜಾವ ಮತ್ತು ಮುಸ್ಸಂಜೆಯ ಸಮಯದಲ್ಲಿ ಆಡುವ ಆಟ. ಹೀಗೆ ಮಟ್ಕಾ ಬುಕ್ಕಿ ಮಾಡಿಕೊಳ್ಳಲಾಗುತ್ತಿದ್ದು, ಜನರು ದುಡಿದ ಹಣವನ್ನೆಲ್ಲ ಇದಕ್ಕೆ ಸುರಿದು ಈ ಚಟದಿಂದ ಹೊರಬರಲಾಗದೆ ಸಾಲ ಮಾಡಿಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ADVERTISEMENT

‘₹10ನ್ನು ಕೊಟ್ಟು ಯಾವುದಾರೂ ಎರಡು ನಂಬರ್‌ ಆಯ್ಕೆ ಮಾಡುತ್ತಾರೆ. ಅದೇ ನಂಬರ್ ಅದೃಷ್ಟ ಸಂಖ್ಯೆಯಾಗಿ ಬಂದರೆ ₹700 ಬರುತ್ತದೆ ಎನ್ನುವ ಆಸೆ ಜನರದ್ದು. ಇದರಲ್ಲಿ ವಿದ್ಯಾರ್ಥಿ-ಯುವಜನರು ಸೇರಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿರುವುದು ದುರಂತ’ ಎಂದು ಗಾಂಧಿನಗರದ ಪ್ರಜ್ಞಾವಂತ ಯುವಕರು ಕಳವಳ ವ್ಯಕ್ತಪಡಿಸಿದ್ದಾರೆ.

ಗಾಂಧಿನಗರದ ಜಂಬುನಾಥನಹಳ್ಳಿಯಲ್ಲಿ ಮಟ್ಕಾ ಮತ್ತು ಇಸ್ಲೀಟ್ ಜೂಜಾಟ ನಡೆಸುತ್ತಿರುವ ವ್ಯಕ್ತಿಗಳ ಮೇಲೆ ರಾಜಕೀಯ ಪಕ್ಷಗಳ ನಾಯಕರ ಕೃಪಾರ್ಶೀವಾದವಿದೆ.‌ ಪೊಲೀಸರಿಗೆ ಪ್ರತಿ ತಿಂಗಳು ಇಂತಿಷ್ಟು ಮಾಮೂಲು ಮುಟ್ಟುತ್ತಿದೆ. ಆದ್ದರಿಂದಲೆ ಈ ಬಗ್ಗೆ ಗೊತ್ತಿದ್ದರೂ ಗೊತ್ತಿಲ್ಲದಂತೆ ಪೊಲೀಸ್ ಅಧಿಕಾರಿಗಳು ಮೌನವಹಿಸಿದ್ದಾರೆ ಎಂಬುದು ಸಾರ್ವಜನಿಕರ ಆಪಾದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.