ADVERTISEMENT

ರಾಯಚೂರು: ಶೇ 1ರಷ್ಟು ಮೀಸಲಾತಿಗೆ ಒತ್ತಾಯಿಸಿ ಅಲೆಮಾರಿಗಳ ‌ಪ್ರತಿಭಟನೆ

protest

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 6:13 IST
Last Updated 18 ಸೆಪ್ಟೆಂಬರ್ 2025, 6:13 IST
ರಾಯಚೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಅಲೆಮಾರಿಗಳು ಪ್ರತಿಭಟನೆ ನಡೆಸಿದರು
ರಾಯಚೂರಿನ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಅಲೆಮಾರಿಗಳು ಪ್ರತಿಭಟನೆ ನಡೆಸಿದರು   

ರಾಯಚೂರು: ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ವರದಿ ಅನ್ವಯ ಅಲೆಮಾರಿಗಳಿಗೆ ಶೇಕಡ 1ರಷ್ಟು ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಬಲಾಢ್ಯ ಜಾತಿಗಳೊಂದಿಗೆ ಅಲೆಮಾರಿ ಸಮುದಾಯ ಸೇರಿಸಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ ಎಂದು ಅಲೆಮಾರಿಗಳು ಘೋಷಣೆ ಕೂಗಿ ಆಕ್ರೋಶ ವ್ಕಕ್ತಪಡಿಸಿದರು.

ಮೀಸಲಾತಿಗೆ ಜನಸಂಖ್ಯೆಯನ್ನೇ ಮಾನದಂಡವಾಗಿ ಮಾಡಲಾಗಿದೆ. ಅಲೆಮಾರಿ ಸಮುದಾಯದ 49 ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ. ತೆಲಂಗಾಣದಲ್ಲಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕಲ್ಪಿಸಿಲ್ಲ. ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಗೆ ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ಪೋತರಾಜ ಸಮಾಜದವರು ಬಾರಕೋಲನೊಂದಿಗೆ, ಡೊಬ್ಬ ಸಮುದಾಯದವರು ಹಣಿಗೆ ಇನ್ನಿತರ ಮಾರಾಟ ಸಾಮಾಗ್ರಿಗಳೊಂದಿಗೆ. ಅನೇಕ ಮಹಿಳೆಯರು ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಪ್ರತಿಭಟನೆಯಲ್ಲಿ ಬುಡ್ಗ ಜಂಗಮ, ಸುಡುಗಾಡುಸಿದ್ಧ, ಚೆನ್ನದಾಸರ, ಹೊಲೆಯದಾಸರ, ಸಿಳ್ಳೆಕಾತ, ಸಿಂಧೋಳ, ಮಾಲದಾಸರ, ಡೊಂಬರ ಹಾಗೂ ದಕ್ಕಲಿಗ ಸಮುದಾಯವರು ಪಾಲ್ಗೊಂಡಿದ್ದರು.

ಮುಖಂಡರಾದ ಶಿವರಾಜ ರುದ್ರಾಕ್ಷ, ಹುಸೇನಪ್ಪ ಉಮೇಶ , ಶ್ರೀನಿವಾಸ ದಾಸರ, ಯಲ್ಲಪ್ಪ ವಿಭೂತಿ, ಜಂಬಣ್ಣ ಡೊಕ್ಕ, ಶ್ರೀನಿವಾಸ ಸಿಂಧೋಳ, ದುರ್ಗಪ್ಪ ವಿಭೂತೆ, ಬಸಪ್ಪ, ಸಿಂಹದ್ರಿ, ಚನ್ನಪ್ಪ, ಶ್ರೀನಿವಾಸ ಎಸ್ ಆರ್, ರಂಗಪ್ಪ ಯಲ್ಲಪ್ಪ ಜವಳಗೇರಾ, ಮಲ್ಲಯ್ಯ ಸಿರವಾಟಿ, ಎಸ್‌.ಆರ್‌.ಭೀಮರಾಯ ಭಾಗವಹಿಸಿದ್ದರು.

ನಂತರ ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ಉದ್ಯಾನವನದ ವರೆಗೆ ಮೆರವಣಿಗೆ ನಡೆಸಿದರು. ಪ್ರತಿಭಟನೆಯಿಂದಾಗಿ ಸ್ಟೇಷನ್ ರಸ್ತೆಯಲ್ಲಿ ಕೆಲ ಹೊತ್ತು ಸಂಚಾರ ಒತ್ತಡ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.