ADVERTISEMENT

ಕವಿತಾಳ: ಹಚ್ಚ ಹಸಿರಿನಿಂದ ಕಂಗೊಳಿಸುವ ‘ಊಟಿ’

ವಿಶಾಲವಾಗಿ ಹರಡಿಕೊಂಡಿರುವ ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿಗಳು

ಮಂಜುನಾಥ ಎನ್ ಬಳ್ಳಾರಿ
Published 21 ಆಗಸ್ಟ್ 2021, 14:17 IST
Last Updated 21 ಆಗಸ್ಟ್ 2021, 14:17 IST
ಕವಿತಾಳ ಸಮೀಪದ ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿ
ಕವಿತಾಳ ಸಮೀಪದ ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿ   

ಕವಿತಾಳ: ಪಟ್ಟಣದಿಂದ ಆನ್ವರಿ ಗ್ರಾಮ ಸಂಪರ್ಕಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯ ಎರಡು ನರ್ಸರಿಗಳಿವೆ. ಈ ಪ್ರದೇಶವು ಸಂಪೂರ್ಣ ಹಸಿರಿನಿಂದ ಕೂಡಿದೆ. ಹೀಗಾಗಿ ಸ್ಥಳೀಯರು ಈ ಪ್ರದೇಶವನ್ನು ’ಊಟಿ‘ ಎಂದೂ ಕರೆಯುತ್ತಾರೆ.

ಗುಡ್ಡ ಪ್ರದೇಶ, ಗಿಡ ಮರಗಳು, ಹಸಿರು ವಾತಾವರಣ, ಪಕ್ಷಿಗಳ ಕಲರವ ಸೇರಿದಂತೆ ಪ್ರಕೃತಿ ಸೌಂದರ್ಯ ಸುತ್ತಮುತ್ತಲಿನ ಜನರಿಗೆ ಅಚ್ಚು ಮೆಚ್ಚಿನ ಪಿಕ್‌ನಿಕ್‍ ಸ್ಥಳವಾಗಿದೆ. ಯುವಕರಿಗೆ ನೆಚ್ಚಿನ ಪೋಟೋ ಶೂಟ್‍ ತಾಣವಾಗಿದೆ.

ಇಲ್ಲಿನ ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಶ್ರೀಗಂಧ, ರಕ್ತ ಚಂದನ, ಮಾವು ನಿಂಬೆ, ಪೇರಲ, ಜಂಬು ನೇರಳೆ, ನಾಯಿ ನೇರಳೆ, ಸಾಗವಾನಿ, ಮಹಾಘನಿ, ಹೆಬ್ಬೇವು, ಕರಿಬೇವು, ನುಗ್ಗೆ ಮತ್ತಿತರ ಸಸಿಗಳನ್ನು ಬೆಳೆಸಿ ರೈತರಿಗೆ ನೀಡಲಾಗುತ್ತಿದೆ. ಒಂದು ವರ್ಷಕ್ಕೆ ಅಂದಾಜು 1 ಲಕ್ಷ ಸಸಿಗಳನ್ನು ಬೆಳೆಸಲಾಗುತ್ತಿದೆ. ವಿಶೇಷವೆಂದರೆ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಎರಡು ವರ್ಷದ ಅವಧಿಯಲ್ಲಿ ಫಲ ನೀಡುವಂತ ಕಸಿ ಮಾಡಿದ ಮಾವು, ಪೇರಲ ಮತ್ತಿತರ ಸಸಿಗಳನ್ನು ಬೆಳೆಸಿ ರೈತರಿಗೆ ನೀಡಲು ಅಗತ್ಯ ತಯಾರಿಯನ್ನೂ ಸಹ ಮಾಡಿಕೊಳ್ಳಲಾಗಿದೆ.

ADVERTISEMENT

‘ಹಸಿರು ಮನೆ ಮತ್ತಿತರ ಕೃತಕ ಪದ್ಧತಿ ಹೊರತುಪಡಿಸಿ ನರ್ಸರಿಯಲ್ಲಿ ಸಸಿಗಳನ್ನು ಸ್ವಾಭಾವಿಕ ಹಾಗೂ ನೈಸರ್ಗಿಕ ರೀತಿಯಲ್ಲಿ ಬೆಳೆಸಲಾಗುತ್ತಿದೆ. ಹೀಗಾಗಿ ನೆಟ್ಟ ನಂತರ ಸಸಿಗಳು ಸಾಯುವುದಿಲ್ಲ. ಮಲ್ಲದಗುಡ್ಡ, ಪಾಮನಕಲ್ಲುರು, ಕಡ್ಡೋಣಿ ಸೇರಿದಂತೆ ವಿವಿಧೆಡೆ ರೈತರಿಗೆ ನೀಡಿದ ಸಸಿಗಳು ಬಹುತೇಕ ಬೆಳೆವಣಿಗೆಯಾಗಿವೆ. ಸಸಿಗಳನ್ನು ಉಚಿತವಾಗಿ ನೀಡುವುದರ ಜತೆಗೆ ತಗ್ಗು (ಗುಂಡಿ) ತೋಡಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇಲಾಖೆ ವತಿಯಿಂದಲೇ ಸಸಿಗಳನ್ನು ನೆಡಲಾಗುತ್ತಿದೆ’ ಎಂದು ಸಾಮಾಜಿಕ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಹೇಳಿದರು.

‘ಕಳೆದ ಎರಡು ವರ್ಷಗಳ ಹಿಂದೆ ನರ್ಸರಿಯಲ್ಲಿ ಪಡೆದು ಅಂದಾಜು 400 ಶ್ರೀಗಂಧ ಮತ್ತು ಪೇರಲ ಸಸಿಗಳನ್ನು ಎರಡು ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದು ಹುಲುಸಾಗಿ ಬೆಳೆದಿವೆ’ ಎಂದು ಕಡ್ಡೋಣಿಯ ರೈತ ಮಹಿಳೆ ಲಕ್ಷ್ಮೀ ಹೇಳಿದರು.

‘ಗೆಳೆಯರೊಂದಿಗೆ ಆಗಾಗ ಫೋಟೋ ಶೂಟ್‌ಗೆ ಬರುತ್ತಿರುತ್ತೇವೆ. ಇಲ್ಲಿನ ಪರಿಸರ ಕಣ್ಮನ ಸೆಳೆಯುತ್ತದೆ’ ಎಂದು ವಿದ್ಯಾರ್ಥಿ ಅನಿಲ್‍ ತಿಳಿಸಿದರು.

***

ಇದೇ ಮೊದಲ ಬಾರಿಗೆ ಕಸಿ ಮಾಡಿದ ಸಸಿಗಳನ್ನು ಬೆಳೆಯಲು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ. ರೈತರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು.

-ವಿಜಯಕುಮಾರ, ಉಪ ವಲಯ ಅರಣ್ಯಾಧಿಕಾರಿ

***

ನರ್ಸರಿಯಲ್ಲಿ ಪಡೆದ ವಿವಿಧ ಸಸಿಗಳು ಬಹುತೇಕ ಬೆಳೆವಣಿಗೆಯಾಗಿದ್ದು ಯಾವುದೇ ಸಸಿ ಲೋಪವಾಗಿಲ್ಲ. ಹೀಗಾಗಿ ರೈತರು ಇಲ್ಲಿನ ಸಸಿಗಳನ್ನು ನಾಟಿ ಮಾಡಬಹುದು.

-ಲಕ್ಷ್ಮೀ ಕಡ್ಡೋಣಿ, ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.