
ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಪ್ರಯುಕ್ತ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿರುವ ಆಡಳಿತ ಕಚೇರಿ ಕಟ್ಟಡದ ಕೆಳ ಮಹಡಿಯಲ್ಲಿ ಆಯೋಜಿಸಿರುವ ಬೃಹತ್ ಮತ್ಸ್ಯ ಮೇಳ ಮಕ್ಕಳು ಸೇರಿದಂತೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಮೀನುಗಾರಿಕೆ ಇಲಾಖೆಯಿಂದ ಅಚ್ಚುಕಟ್ಟಾಗಿ ಮತ್ಸ್ಯ ಮೇಳದ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಆಕರ್ಷಕ ಫಲಕಗಳನ್ನು ಹಾಕಲಾಗಿದೆ. ಕರ್ನಾಟಕದ ಕಡಲ ತೀರದಲ್ಲಿನ ಒಟ್ಟು 65 ಬಗೆಯ ಅಲಂಕಾರಿಕ ಮೀನುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಗೋಲ್ಡ್ ಫಿಶ್, ಆಸ್ಕರ್ ಫಿಶ್, ಪಪ್ಫರ್ ಫಿಶ್, ಬಾರ್ಮಸ್ ಮತ್ಸ್ಯ ತಳಿಗಳು ಮತ್ತು ಇನ್ನೂ ವಿವಿಧ ತಳಿಯ ಅಲಂಕಾರಿಕ ಮೀನುಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ಬಿಸಿಲಿನ ಕಾರಣಕ್ಕೆ ಬೆಂಗಳೂರಿನಿಂದ ಲಾರಿಯಲ್ಲಿ ಬಹಳ ನಾಜೂಕಾಗಿ ತರಲಾಗಿದೆ’ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತಕುಮಾರ ತಿಳಿಸಿದರು.
‘ಒಂದು ಮೀನಿನ ಬೆಲೆ ₹600 ರಿಂದ ₹800 ಇದೆ. ಕನಿಷ್ಠ ಎರಡು ವರ್ಷದಿಂದ 20 ವರ್ಷಗಳವರೆಗೆ ಅಕ್ವೇರಿಯಂನಲ್ಲಿ ಬದುಕಬಲ್ಲ ಮೀನುಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ’ ಎಂದು ಹೇಳಿದರು.
‘ಮೂರು ದಿನ ಮತ್ಸ್ಯ ಮೇಳ ಏರ್ಪಡಿಸಲಾಗಿದೆ. 65 ತಳಿಗಳಲ್ಲಿ ಐದು ಮತ್ಸ್ಯ ತಳಿಗಳು ವಿಶಿಷ್ಟವಾಗಿವೆ. ಕಲ್ಯಾಣ ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಮತ್ಸ್ಯ ಮೇಳದಲ್ಲಿ ನಾಲ್ಕು ಕಡೆ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಿದ್ದೇವೆ’ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಎನ್.ಬಸವನಗೌಡ ತಿಳಿಸಿದರು.
‘ಮತ್ಸ್ಯ ಮೇಳಕ್ಕೆ ಕೇಂದ್ರ ಸರ್ಕಾರ ₹ 10 ಲಕ್ಷ ಹಾಗೂ ರಾಜ್ಯದ ಮೀನುಗಾರಿಕೆ ಇಲಾಖೆ ₹ 10 ಲಕ್ಷ ಬಿಡುಗಡೆ ಮಾಡಿದೆ. ಇದೇ ಅವಧಿಯಲ್ಲಿ ಮೀನುಗಾರರಿಗೂ ತಿಳಿವಳಿಕೆ ನೀಡಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.