ರಾಯಚೂರು: ‘ಮಣ್ಣಿನ ಆರೋಗ್ಯ ಕಾಪಾಡಲು ಮತ್ತು ದೀರ್ಘಕಾಲೀನ ಉತ್ಪಾದಕತೆ ಸಾಧಿಸಲು ರಾಸಾಯನಿಕ ರಸಗೊಬ್ಬರಗಳ ಬಳಕೆ ಕಡಿಮೆ ಮಾಡಬೇಕು’ ಎಂದು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಪತಂಗೆ ಜಯವಂತ್ ರಾವ್ ಹೇಳಿದರು.
ಇಲ್ಲಿನ ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭವ್ಯ ಅಧೀಕೃತ ಮಾರಾಟಗಾರ (ಡೀಲರ್ಸ್) ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಮತೋಲನಯುತ ಮತ್ತು ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಶಾಶ್ವತ ಕೃಷಿ ಪದ್ಧತಿಗಳ ಅಗತ್ಯತೆಯನ್ನು ಅರಿಯಬೇಕು’ ಎಂದು ಸಲಹೆ ನೀಡಿದರು.
ಸಹಕಾರ ಸಂಘಗಳ ಉಪನಿಬಂಧಕ ಎಂ.ಆರ್.ಮನೋಹರ ಮಾತನಾಡಿ, ‘ಸಹಕಾರ ಇಲಾಖೆಯ ಕೃಷಿಕ ಭಾರತಿ ಕೋ-ಆಪರೇಟೀವ್ ನಿಯಮಿತ (ಕ್ರೀಬ್ಕೋ) ಇಂದು ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ಉತ್ಪಾದಿಸುವ ಬೃಹತ್ ಕೈಗಾರಿಕೆಯಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.
‘ರೈತರು ಮಣ್ಣಿನ ಪರೀಕ್ಷೆಗೆ ಗಮನ ಹರಿಸಬೇಕು. ವಲಯದ ಮಣ್ಣಿಗೆ ಅನುಗುಣವಾಗಿ ಗೊಬ್ಬರದ ಬಳಕೆಯಿಂದ ಬೆಳೆಯ ಆರೋಗ್ಯ ವೃದ್ಧಿಸುವ ಮತ್ತು ಹೆಚ್ಚು ಫಸಲು ಬರಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.
ಕೃಷಕ ಭಾರತಿ ಕೋ-ಆಪರೇಟೀವ್ ನಿಯಮಿತದ ಜಿಲ್ಲಾ ಸ್ಥಳೀಯ ಮಾರಾಟ ವ್ಯವಸ್ಥಾಪಕ ಶಶಿಕುಮಾರ ಇಫ್ಕೋ ಜಿಲ್ಲಾ ಸ್ಥಳೀಯ ಮಾರಾಟ ವ್ಯವಸ್ಥಾಪಕ ಸಚಿನ್, ಪ್ರಧಾನ ವ್ಯವಸ್ಥಾಪಕ ಬಂದಯ್ಯ ಸ್ವಾಮಿ, ಲೇಕಪಾಲಕ ನರಸಿಂಹಪ್ಪ, ಪ್ರಗತಿಪರ ರೈತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.