ರಾಯಚೂರು: ಬನ್ನಿ ನಮ್ಮೂರಿಗೆ ಎಂದು ರಾಯಚೂರಿನವರು ಬೇರೆ ಜಿಲ್ಲೆಯಲ್ಲಿರುವ ಗೆಳೆಯರು ಹಾಗೂ ನೆಂಟರಿಗೆ ಆಹ್ವಾನ ನೀಡಿದರೆ ಸಾಕು. ಅದಕ್ಕೆ ಕ್ಷಣಾರ್ಧದಲ್ಲಿ ನಿಮ್ಮೂರಲ್ಲಿ ಕಸ, ದೂಳು ಹಾಗೂ ಬಿಸಿಲು ಬಿಟ್ಟರೆ ಏನಿದೆ? ಎಂದು ಗೆಳೆಯರಿಂದ ಉತ್ತರ ದೊರೆಯುತ್ತದೆ. ಜಿಲ್ಲಾಧಿಕಾರಿ ನಿತೀಶ್ ಅವರು ಅಧಿಕಾರಿಗಳ ಸಭೆ ನಡೆಸಿದಾಗಲೂ ‘ಇಂಥ ಹೊಲಸು ಊರು‘ ಎಲ್ಲಿಯೂ ನೋಡಿಲ್ಲ ಎಂದೇ ಹೇಳಿದ್ದರು.
ಹೌದು! ಇತಿಹಾಸದಲ್ಲಿ ರಾಜವೈಭವ ಮೆರೆದ ರಾಯಚೂರು ಹಿಂದುಳಿಯಲು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೇ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದರೂ ಅದನ್ನು ಜಿಲ್ಲಾಡಳಿತವೇ ಸರಿಯಾಗಿ ಬಳಸಿಕೊಂಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಪ್ರವಾಸೋದ್ಯಮದ ಅಭಿವೃದ್ಧಿಗೆ ನೆರವಾಗಿಲ್ಲ.
ಜಿಲ್ಲಾಧಿಕಾರಿ ನಿತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಜಿಲ್ಲೆಗೆ ಬಂದ ಮೇಲೆ ಸ್ಮಾರಕಗಳಿರುವ ಕೆಲ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದಿಟ್ಟ ನಿರ್ಧಾರ ಕೈಗೊಂಡು ಹೊಸ ಜಿಲ್ಲಾಡಳಿತದ ಭವನಕ್ಕೆ ಕಚೇರಿ ಸ್ಥಳಾಂತರ ಮಾಡಿದ್ದಾರೆ. ನಗರದಲ್ಲಿರುವ ಕೋಟೆ ಪ್ರದೇಶವನ್ನೂ ವೀಕ್ಷಿಸಿದ್ದಾರೆ. ಹೀಗಾಗಿ ಜಿಲ್ಲೆ ಪ್ರವಾಸೋದ್ಯಮ ಇನ್ನು ಅಭಿವೃದ್ದಿ ಕಾಣಲಿದೆ ಎನ್ನುವ ಆಸೆ ಜಿಲ್ಲೆಯ ಜನರಲ್ಲಿ ಚಿಗುರೊಡೆದಿದೆ.
ಅತ್ಯಂತ ಹಳೆಯದಾದ ರಾಯಚೂರು ಜಿಲ್ಲೆಯಲ್ಲಿ ಒಂದು ಸ್ಮಾರಕವೂ ಎಎಸ್‌ಐ ವ್ಯಾಪ್ತಿಯಲ್ಲಿ ಇಲ್ಲ. ಎಲ್ಲ ಸ್ಮಾರಕಗಳು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧೀನದಲ್ಲೇ ಇದೆ. ಕಾನೂನು ಭಯ ಇಲ್ಲದ ಕಾರಣ ಸ್ಮಾರಕಗಗಳ ಜಾಗ ಅತಿಕ್ರಮಣವಾಗಿದೆ. ಕೋಟೆ ಪ್ರದೇಶದಲ್ಲಿನ ಬಂಡೆಗಲ್ಲುಗಳನ್ನೇ ಒಡೆದು ಕಟ್ಟಡ ನಿರ್ಮಿಸುವ ಕಾರ್ಯ ಇಂದಿಗೂ ನಡೆದಿದೆ.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ಹಲ್ಲಿಲ್ಲದ ಹಾವಿನಂತಾಗಿದೆ. ಸ್ಮಾರಕಗಳ ಸಂರಕ್ಷಣಾ ಸಮಿತಿಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರು. ಆದರೆ, ಸ್ಮಾರಕಗಳ ಜಾಗ ಉಳಿಸಿಕೊಳ್ಳಲು ಹಿಂದಿನ ಒಬ್ಬ ಜಿಲ್ಲಾಧಿಕಾರಿಯೂ ಆಸಕ್ತಿ ತೋರಿಸಿಲ್ಲ. ಅಭಿವೃದ್ಧಿಗೆ ದಿಟ್ಟತನವನ್ನೂ ಪ್ರದರ್ಶಿಸಲಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲ ಸ್ಮಾರಕಗಳು ಪಾಳು ಬಿದ್ದಿವೆ. ಜನರು ಸಹ ಐಎಎಸ್ ಅಧಿಕಾರಿಗಳ ಮೇಲಿದ್ದ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ.
ರಾಯಚೂರು ಕೇಂದ್ರ ಬಸ್ ನಿಲ್ದಾಣ ಹಿಂಬದಿಯ ಬೆಟ್ಟದ ಮೇಲಿನ ವೀಕ್ಷಣಾ ಗೋಪುರದ ಮೇಲೆ ಮರ ಬೆಳೆದರೂ ತೆರವುಗೊಳಿಸುವವರಿಲ್ಲ.
ರಾಯಚೂರಿನ ಕೇಂದ್ರ ಬಸ್ ನಿಲ್ದಾಣ ಹಿಂಬದಿಯ ಬೆಟ್ಟದ ಮೇಲಿನ ಕೋಟೆಗೆ ಹೋಗುವ ದಾರಿಯ ಮೆಟ್ಟಿಲುಗಳು ಬಿದ್ದು ಹಲವು ವರ್ಷಗಳೇ ಕಳೆದಿವೆ. ಬೆಟ್ಟದ ಮೇಲೆ ಒಂದು ದೊಡ್ಡದಾದ ಲೋಹದ ತೋಪು, ವೀಕ್ಷಣಾ ಗೋಪುರ ಹಾಗೂ ಒಂದು ಸ್ಮಾರಕ ಮಾತ್ರ ಉಳಿದಿದೆ.
ನಿರ್ವಹಣೆಯ ಸಮಸ್ಯೆಯಿಂದಾಗಿ ವೀಕ್ಷಣಾ ಗೋಪುರದ ಮೇಲೆ ಮರ ಬೆಳೆದಿದೆ. ಪಕ್ಕದ ಸ್ಮಾರದ ಮೇಲೆ ಏರಿ ಕೆಲವರು ಸೋಲಾರ್ ದೀಪ ಹಚ್ಚಲು ಮೊಳೆ ಹೊಡೆದ ಕಾರಣ ಸ್ಮಾರಕದ ಗೋಡೆ ಒಂದು ಭಾಗ ಬಿದ್ದಿದೆ. ಬೆಟ್ಟದ ಮೇಲೆ ಪ್ಲಾಸ್ಟಿಕ್, ಬಿಯರ್ ಬಾಟಲಿಗಳು ಹಾಗೂ ಪ್ಲಾಸ್ಟಿಕ್ ಹಾಳೆಗಳು ಬಿದ್ದುಕೊಂಡಿವೆ.
ಪೊಲೀಸ್ ಇಲಾಖೆಯ ವೈರ್‌ಲೆಸ್ ವಿಭಾಗದವರು ವೈರ್‌ಲೆಸ್ ಮರುಪ್ರಸಾರ ಕೇಂದ್ರ ಸ್ಥಾಪಿಸಿ ನಿಯಮ ಉಲ್ಲಂಘಿಸಿದ್ದಾರೆ. ಇದರಿಂದ ಸ್ಮಾರಕದ ಅಂದಕ್ಕೂ ಧಕ್ಕೆ ಉಂಟಾಗಿದೆ. ಎಲ್ಲವೂ ಕಣ್ಣೆದರು ಹಾಳಗಾಗುತ್ತಿದ್ದರೂ ಕೇಳುವವರಿಲ್ಲ.
‘ರಾಯಚೂರು ಬಿಇಒ ಕಚೇರಿ ಪಕ್ಕದ ಸ್ಮಶಾನ ಮಧ್ಯದಲ್ಲೇ ಬೆಟ್ಟದ ಕಡೆಗೆ ಹೋಗಲು ದಾರಿ ಇದೆ. ದರ್ಗಾದ ವರೆಗೂ ಉತ್ತಮ ರಸ್ತೆ ಇದೆ. ದರ್ಗಾಕ್ಕೆ ಮುಂದೆ ಕಾಲು ದಾರಿಯೂ ಇಲ್ಲ. ದೇಹದಲ್ಲಿ ಶಕ್ತಿ ಇದ್ದವರು ಮಾತ್ರ ಬಂಡೆಗಳನ್ನು ಏರಿ ಮೇಲೆ ಬರಬೇಕಾದ ಸ್ಥಿತಿ ಇದೆ‘ ಎನ್ನುತ್ತಾರೆ ರಾಯಚೂರು ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ ಹಫೀಜುಲ್ಲಾ.
‘ಏಪ್ರಿಲ್ 24ರಂದು ಬೆಟ್ಟದ ಮೇಲೆ ಹೋಗಿ ಅಲ್ಲಿನ ಸ್ಥಿತಿಯನ್ನು ಪರಿಶೀಲಿಸಲಾಗಿದೆ. ಪ್ರವಾಸಿಗರು ಬೆಟ್ಟದ ಮೇಲೆ ಬರಲು ಮೆಟ್ಟಿಲುಗಳನ್ನು ನಿರ್ಮಿಸಬೇಕಾಗಿದೆ. ಸಾರ್ವಜನಿಕರು ಕುಳಿತುಕೊಳ್ಳಲು ಹಾಗೂ ಬೆಂಚ್ ಹಾಕಬೇಕು ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಮೊದಲ ಹಂತದಲ್ಲಿ ಇಷ್ಟು ಕೆಲಸ ಆಗಬೇಕಿದೆ. ರಾಜ್ಯ ಪುರಾತತ್ವ ಇಲಾಖೆಯ ಎಂಜಿನಿಯರ್‌ಗೆ ಪ್ರಸ್ತಾವ ಸಿದ್ದಪಡಿಸಿ ಕೊಡುವಂತೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ನಿತೀಶ್ ಹೇಳುತ್ತಾರೆ.
ರಾಯಚೂರು ಕೇಂದ್ರ ಬಸ್ ನಿಲ್ದಾಣ ಹಿಂಬದಿಯ ಬೆಟ್ಟದ ಮೇಲಿನ ಸ್ಮಾರಕದ ಗೋಡೆ ನಿರ್ವಹಣೆ ಇಲ್ಲದ ಕಾರಣ ಕುಸಿದು ಬಿದ್ದಿದೆ
ರಾಯಚೂರು ಗುಡ್ಡದ ಮೇಲಿನ ಕೋಟೆ ಪ್ರದೇಶವನ್ನು ₹ 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಅವಕಾಶ ಇದೆ. ಹಿಂದೆ ಮೂರು ಬಾರಿ ಟೆಂಡರ್ ಕರೆದರೂ ಸರಿಯಾದ ಗುತ್ತಿಗೆದಾರರು ಸಿಕ್ಕಿರಲಿಲ್ಲ. ಹೊರಗಿನವರು ಗುತ್ತಿಗೆ ಹರಾಜಿನಲ್ಲಿ ಪಾಲ್ಗೊಂಡಿರಲಿಲ್ಲ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು.
ಸಿಎಸ್‌ಆರ್ ನಿಧಿ, ಲೋಕಸಭಾ ಕ್ಷೇತ್ರದ ಸದಸ್ಯರ, ರಾಜ್ಯಸಭಾ ಸದಸ್ಯರ ಹಾಗೂ ವಿಧಾನ ಪರಿಷತ್ ಸದಸ್ಯರ ಅನುದಾನ ಬಳಸಲು ಅವಕಾಶ ಇದೆ. ಆದರೆ ಜನಪ್ರತಿನಿಧಿಗಳು ಅಭಿವೃದ್ಧಿಗೆ ಮನಸ್ಸು ಮಾಡಬೇಕು ಅಷ್ಟೇ. ಕೆಪಿಎಸ್‌ಸಿ, ಹಟ್ಟಿ ಚಿನ್ನದಗಣಿ ಕಂಪನಿಯ ಸಿಎಸ್‌ಆರ್ ನಿಧಿ ಹಾಗೂ ಖಾಸಗಿ ಕಂಪನಿಗಳು ಅಭಿವೃವೃದ್ಧಿಗೆ ಕೈಜೋಡಿಸಬಹುದಾಗಿದೆ.
ಮೂಲಸೌಕರ್ಯ ಅಭಿವೃದ್ಧಿಪಡಿಸಲು ಜಿಲ್ಲಾಡಳಿತಕ್ಕೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅವಕಾಶ ಇದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದರೆ ಎಲ್ಲವೂ ಸಾಧ್ಯವಿದೆ ಎಂದು ತಜ್ಞರು ಹೇಳುತ್ತಾರೆ.
1. ರಾಯಚೂರು ಮಹಾನಗರಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಡಿಯುಡಿಸಿಯಿಂದ ಮೂಲಸೌಕರ್ಯ
2. ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಮಿತ್ರ ಯೋಜನೆ ಅಡಿ ಕಾವಲುಗಾರ ನೇಮಕ
3. ತೋಟಗಾರಿಕೆ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆಯಿಂದ ಉದ್ಯಾನ ನಿರ್ಮಾಣ
4. ಪರಿಸರ ಪ್ರೇಮಿಗಳು, ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ಸ್ವಯಂ ಸೇವಕರಿಂದ ವಾರಕ್ಕೊಂದು ಬಾರಿ ಸ್ವಚ್ಛತೆ, ಶ್ರಮದಾನ
5. ಸ್ಮಾರಕಗಳ ರಕ್ಷಣೆಗೆ ಪರಂಪರಾ ಕೂಟ ರಚನೆ
1. ಬೀದರ್, ಕಲಬುರ್ಗಿಯಲ್ಲಿರುವ ಕುಶಲಕರ್ಮಿಗಳಿಂದ ಸ್ಮಾರಕಗಳ ಪುನರುತ್ಥಾನ
2. ಇತಿಹಾಸದ ಮೇಲೆ ಬೆಳಕು ಚೆಲ್ಲುವ ಮಾಹಿತಿ ಫಲಕಗಳ ಅಳವಡಿಕೆ
3. ಸ್ಮಾರಕಗಳ ಸಂರಕ್ಷಣೆಗೆ ಕೋಟೆ ಮೇಲೆ ಆವರಣದಲ್ಲಿ ರಕ್ಷಣಾ ಗೋಡೆ ನಿರ್ಮಾಣ
4. ಅಭಿವೃದ್ಧಿಗೆ ಕೈಗಾರಿಕೋದ್ಯಮಗಳ ನೆರವು ಪಡೆಯಲು ಯತ್ನ
5. ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ಬಾಟಲಿಗಳ ಸಂಪೂರ್ಣ ನಿಷೇಧ
ಖಾಸಗಿ ಸಹಭಾಗಿತ್ವದಲ್ಲಿಸಾಹಸ ಪ್ರವಾಸೋದ್ಯಮ ಉತ್ತೇಜಿಸಲು ಯಲ್ಲನಗುಡ್ಡ, ಅಂಜನಾದ್ರಿ, ಮೈಲಾರಲಿಂಗೇಶ್ವರ ಬೆಟ್ಟ ಸೇರಿ ರಾಜ್ಯದ 10 ಕಡೆ ರೋಪ್ ವೇ ನಿರ್ಮಿಸಲು ಸರ್ಕಾರ ಕಳೆದ ಜನವರಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿಒಪ್ಪಿಗೆ ನೀಡಿದೆ. ಇದೇ ಅವಧಿಯಲ್ಲಿ ರಾಯಚೂರನ್ನು ಕಡೆಗಣಿಸಿದೆ.
ನಗರ ಮಧ್ಯದಲ್ಲೇ ನಾಲ್ಕು ಗುಡ್ಡಗಳು ಇವೆ. ಒಂದು ರಾಜ್ಯ ಪ್ರಾಚ್ಯವಸ್ತು ಇಲಾಖೆ, ಇನ್ನೆರಡು ಮಹಾನಗರ ಪಾಲಿಕೆ ಹಾಗೂ ಮಗದೊಂದು ಆರ್‌ಟಿಒ ಕಚೇರಿ ಹಿಂಬದಿಯ ಗುಡ್ಡ ಅರಣ್ಯ ಇಲಾಖೆಯ ಅಧಿನದಲ್ಲಿ ಇದೆ. ಎರಡು ಗುಡ್ಡಗಳಿಗೆ ಕೇಬಲ್ ಜೋಡಿಸಿ ರಾಯಚೂರಲ್ಲೂ ರೋಪ್ ವೇ ಮಾಡಲು ಅವಕಾಶ ಇದೆ.
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ದಿಸೆಯಲ್ಲಿ ಒಮ್ಮೆಯೂ ಚಿಂತನೆ ಮಾಡಿಲ್ಲ. ಆಸಕ್ತ ಉದ್ಯಮಿಗಳೊಂದಿಗೆ ಸಭೆ ಅಥವಾ ಚರ್ಚೆಯನ್ನೂ ನಡೆಸಿಲ್ಲ. ರೋಪ್‌ವೇ ಮಾಡಿದರೆ ರಾಯಚೂರು ಸೇರಿದಂತೆ ಜಿಲ್ಲೆಯ ಇತರ ಸ್ಮಾರಕಗಳ ಅಭಿವೃದ್ಧಿಗೂ ಅನುಕೂಲವಾಗಲಿದೆ.
ಪ್ರವಾಸೋದ್ಯಮ ಇಲಾಖೆಯ ಮೂಲಕ ರಾಯಚೂರು ಬೆಟ್ಟದ ಮೇಲಿನ ಕೋಟೆ ಪ್ರದೇಶದಲ್ಲಿ ಒಂದಿಷ್ಟು ಅಭಿವೃದ್ಧಿ ಕೈಗೊಳ್ಳುವ ಉದ್ದೇಶವಿದೆ.ರವೀಂದ್ರ ಜಲ್ದಾರ್ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ರಾಯಚೂರಲ್ಲಿ ಅಪರೂಪದ ಸ್ಮಾರಕಗಳಿವೆ. ಇತಿಹಾಸ ಪರಿಚಯಿಸುವ ದಿಸೆಯಲ್ಲಿ ಬೆಟ್ಟದ ಮೇಲಿನ ಕೋಟೆ ಪ್ರದೇಶ ಅಭಿವೃದ್ಧಿ ಪಡಿಸಬೇಕಿದೆ.ಹಫೀಜುಲ್ಲಾ. ರಾಯಚೂರು ಕೋಟೆ ಅಧ್ಯಯನ ಸಮಿತಿ ಕಾರ್ಯದರ್ಶಿ
ಕೋಟೆ ಅಭಿವೃದ್ದಿಗೆ ಜಿಲ್ಲಾಡಳಿತ ಒಲವು ತೋರಿದೆ. ಅಧಿಕಾರಿಗಳು ಈ ದಿಸೆಯಲ್ಲಿ ಆಸಕ್ತಿ ವಹಿಸಿರುವುದು ಸಂತಸ ತಂದಿದೆ.ರಜಾಕ್ ಉಸ್ತಾದ್ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ
ರಾಯಚೂರು ಕೋಟೆ ಪ್ರದೇಶದ ಅಭಿವೃದ್ಧಿಯಾದರೆ ಜಿಲ್ಲಾ ಕೇಂದ್ರಕ್ಕೆ ಒಂದು ಕಳ ಬರಲಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ.ರೇಖಾ ಬಡಿಗೇರ್ ಕಸಾಪ ತಾಲ್ಲೂಕು ಸಂಘಟನಾ ಕಾರ್ಯದರ್ಶಿ
ರಾಯಚೂರು ಗುಡ್ಡದ ಮೇಲಿಂದ ಕಾಣುವ ದರ್ಗಾ ಹಾಗೂ ಕೇಂದ್ರ ಬಸ್ ನಿಲ್ದಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.