ADVERTISEMENT

ಟ್ರಾಕ್ಟರ್ ಹಿಡಿಯಲು ಹೋಗಿ ಪೊಲೀಸ್ ಜೀಪ್ ಕಾಲುವೆಗೆ ಪಲ್ಟಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:23 IST
Last Updated 15 ಏಪ್ರಿಲ್ 2024, 16:23 IST
ಸಿಂಧನೂರು ತಾಲ್ಲೂಕಿನ ರೈತನಗರ ಕ್ಯಾಂಪಿನ ಬಳಿ ಪೊಲೀಸ್ ಜೀಪ್ ಕಾಲುವೆಯಲ್ಲಿ ಪಲ್ಟಿಯಾಗಿರುವುದು
ಸಿಂಧನೂರು ತಾಲ್ಲೂಕಿನ ರೈತನಗರ ಕ್ಯಾಂಪಿನ ಬಳಿ ಪೊಲೀಸ್ ಜೀಪ್ ಕಾಲುವೆಯಲ್ಲಿ ಪಲ್ಟಿಯಾಗಿರುವುದು   

ಸಿಂಧನೂರು: ಅಕ್ರಮ ಮರಳು ಸಾಗಾಣೆ ಮಾಡುತ್ತಿದ್ದ ಟ್ರಾಕ್ಟರ್‌ ವಶಪಡಿಸಿಕೊಳ್ಳಲು ಹೋಗಿದ್ದ ಪೊಲೀಸ್ ಜೀಪ್ ಕಾಲುವೆಗೆ ಪಲ್ಟಿ ಹೊಡೆದಿರುವ ಘಟನೆ ಸೋಮವಾರ ಬೆಳಿಗ್ಗೆ ರೈತನಗರ ಕ್ಯಾಂಪ್ ಬಳಿ ನಡೆದಿದೆ.

ಬೆಳಿಗ್ಗೆ 9 ಗಂಟೆಗೆ ಮಲ್ಲಾಪುರ ಹಳ್ಳದಲ್ಲಿ ಅಕ್ರಮ ಮರಳನ್ನು ತುಂಬಿಕೊಂಡು ಟ್ರಾಕ್ಟರ್‍ವೊಂದು ತೆರಳುತ್ತಿತ್ತು. ಇದನ್ನು ಕಂಡು ಸಂಚಾರಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ ಕರಿಯಪ್ಪ ಅವರು ಪೊಲೀಸ್ ಜೀಪ್ ತೆಗೆದುಕೊಂಡು ಹಿಂಬಾಲಿಸಿದ್ದಾರೆ.

ಪೊಲೀಸ್ ಜೀಪ್‌ ನೋಡುತ್ತಿದ್ದಂತೆ ಟ್ರಾಕ್ಟರ್ ಚಾಲಕ ವೇಗ ಹೆಚ್ಚಿಸಿದ್ದಾರೆ. ಆ ಸಮಯದಲ್ಲಿ ಓವರ್ ಟೇಕ್ ಮಾಡಲು ಪೊಲೀಸ್ ಜೀಪು ಹೋದಾಗ ಟ್ರಾಕ್ಟರ್‌ ಟ್ರಾಲಿ ತಗುಲಿದ ಪರಿಣಾಮ ಪೊಲೀಸ್ ಸಿಬ್ಬಂದಿಗೆ ನಿಯಂತ್ರಣ ತಪ್ಪಿ ಕಾಲುವೆಯಲ್ಲಿ ಜೀಪು ಪಲ್ಟಿ ಹೊಡೆದಿದೆ. ಅದರಂತೆ ಟ್ರಾಕ್ಟರ್ ಸಹ ಹೊಲದಲ್ಲಿ ಪಲ್ಟಿ ಹೊಡೆದಿದೆ.

ADVERTISEMENT

ಕರಿಯಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ನಂತರ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಸುಧೀರಕುಮಾರ ಬೆಂಕಿ, ಸಂಚಾರಿ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್‍ಗಳಾದ ಕುಂದಪ್ಪ ಹಾಗೂ ಕುಮಾರಸ್ವಾಮಿ ಅವರು ಸ್ಥಳಕ್ಕೆ ಬಂದು ವೀಕ್ಷಿಸಿ, ಜೆಸಿಬಿ ಮೂಲಕ ಪೊಲೀಸ್ ಜೀಪನ್ನು ಹೊರ ತೆಗೆಯಲಾಯಿತು. ಜೀಪಿನ ಮುಂಭಾಗದ ಗ್ಲಾಸ್, ಕನ್ನಡಿ, ಲೈಟ್‍ಗಳು ಹೊಡೆದು ಹೋಗಿವೆ. ಟ್ರಾಕ್ಟರ್ ಚಾಲಕ ಪರಾರಿಯಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಮಿನಲ್ ಕೇಸ್ ದಾಖಲಿಸಿ: ಸಿಂಧನೂರು ತಾಲ್ಲೂಕಿನ ಹಳ್ಳ ಮತ್ತು ನದಿಗಳಲ್ಲಿರುವ ಮರಳನ್ನು ಅಕ್ರಮವಾಗಿ ಟ್ರಾಕ್ಟರ್, ಟಿಪ್ಪರ್ ವಾಹನಗಳಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುವ ದಂಧೆ ಹಗಲು-ರಾತ್ರಿಯೆನ್ನದೇ ರಾಜಾರೋಷವಾಗಿ ನಡೆದಿದೆ. ಈ ದಂಧೆಗೆ ರಾಜಕೀಯ ಪಕ್ಷಗಳ ಮುಖಂಡರು ಬೆಂಬಲವೂ ಇದೆ. ಜೊತೆಗೆ ಪೊಲೀಸ್ ಅಧಿಕಾರಿಗಳಿಗೆ ಪ್ರತಿ ತಿಂಗಳು ಮಾಮೂಲು ಕೊಡುತ್ತೇವೆಂದು ಅಕ್ರಮ ಮರಳು ಸಾಗಾಣಿಕೆ ಮಾಡುವ ಟಿಪ್ಪರ್ ಮಾಲೀಕರು ಹೇಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅತಿವೇಗವಾಗಿ ಟಿಪ್ಪರ್ ವಾಹನಗಳು ಸಂಚರಿಸುವುದರಿಂದ ಡಿಕ್ಕಿ ಹೊಡೆದು ನಾಲ್ಕೈದು ಜನ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಕ್ರಮ ಮರಳು ಸಾಗಾಣಿಕೆ ಮಾಡುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಸವರಾಜ ಬಡಿಗೇರ್ ಎಚ್ಚರಿಸಿದ್ದಾರೆ.

ಸಿಂಧನೂರು ತಾಲ್ಲೂಕಿನ ರೈತನಗರ ಕ್ಯಾಂಪಿನ ಬಳಿ ಟ್ರಾಕ್ಟರ್ ಹೊಲದಲ್ಲಿ ಪಲ್ಟಿಯಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.