ADVERTISEMENT

‘ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಿ’

ವಿಶ್ವ ರೈತ ದಿನಾಚರಣೆ ಅಂಗವಾಗಿ ಬೃಹತ್ ಸಮಾವೇಶ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:27 IST
Last Updated 24 ಡಿಸೆಂಬರ್ 2025, 5:27 IST
ಸಿಂಧನೂರಿನ ಎಪಿಎಂಸಿಯ ಟೆಂಡರ್ ಹಾಲ್ ಪ್ರಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಅಂಗವಾಗಿ ತುಂಗಭದ್ರಾ ರಕ್ಷಣೆ ನಮ್ಮೆಲ್ಲರ ಹೊಣೆ ಜಾಗೃತಿ ಕಾರ್ಯಕ್ರಮ ಮತ್ತು ಬೃಹತ್ ಸಮಾವೇಶದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು
ಸಿಂಧನೂರಿನ ಎಪಿಎಂಸಿಯ ಟೆಂಡರ್ ಹಾಲ್ ಪ್ರಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಅಂಗವಾಗಿ ತುಂಗಭದ್ರಾ ರಕ್ಷಣೆ ನಮ್ಮೆಲ್ಲರ ಹೊಣೆ ಜಾಗೃತಿ ಕಾರ್ಯಕ್ರಮ ಮತ್ತು ಬೃಹತ್ ಸಮಾವೇಶದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು   

ಸಿಂಧನೂರು: ‘ನವಲಿ ಜಲಾಶಯ ನಿರ್ಮಾಣಕ್ಕೆ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸರ್ಕಾರಗಳು ಒಮ್ಮತದ ತೀರ್ಮಾನ ಕೈಗೊಂಡು ಕಾಮಗಾರಿ ಆದಷ್ಟು ಶೀಘ್ರ ಆರಂಭಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು.

ಸ್ಥಳೀಯ ಎಪಿಎಂಸಿಯ ಟೆಂಡರ್ ಹಾಲ್ ಪ್ರಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಜೈ ಜವಾನ್ ಜೈ ಕಿಸಾನ್ ಜನಸೇವಾ ಸಂಘ ತಾಲ್ಲೂಕು ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ರೈತ ದಿನಾಚರಣೆ ಅಂಗವಾಗಿ ತುಂಗಭದ್ರಾ ರಕ್ಷಣೆ ನಮ್ಮೆಲ್ಲರ ಹೊಣೆ ಜಾಗೃತಿ ಕಾರ್ಯಕ್ರಮ ಮತ್ತು ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ತುಂಗಭದ್ರಾ ಜಲಾಶಯದ ನೀರನ್ನು ಮೂರು ರಾಜ್ಯಗಳು ಬಳಸಿಕೊಳ್ಳುತ್ತಿವೆ. ವಿಶೇಷವಾಗಿ ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿದೆ. ಆದರೆ ಡ್ಯಾಂನಲ್ಲಿ 30 ಟಿಎಂಸಿಗೂ ಅಧಿಕ ಹೂಳು ತುಂಬಿರುವ ಕಾರಣ ಪ್ರತಿವರ್ಷವು ಬೆಳೆಗಳಿಗೆ ನೀರಿನದ್ದೇ ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಪರ್ಯಾಯವಾಗಿ ನವಲಿ ಜಲಾಶಯ ನಿರ್ಮಿಸುವುದು ಅತ್ಯಗತ್ಯ’ ಎಂದು ಹೇಳಿದರು.

ADVERTISEMENT

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ ‘ಕೈಗಾರಿಕೆಗಳು ತಯಾರಿಸುವ ವಸ್ತುಗಳಿಗೆ ಬೆಲೆ ನಿಗದಿಪಡಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆದರೆ ರೈತರು ಬೆಳೆಯುವ ಉತ್ಪನ್ನಗಳಿಗೆ ಎಂಎಸ್‍ಪಿ ನೀಡದಿರುವುದು ಎಷ್ಟು ಸರಿ. ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇಲ್ಲಿಯವರೆಗೆ ಆಳಿದ ಪ್ರಭುತ್ವಗಳು ಇಚ್ಛಾಶಕ್ತಿ ವಹಿಸಿಲ್ಲ’ ಎಂದರು.

ಸಾನ್ನಿಧ್ಯ ವಹಿಸಿದ್ದ ಮೂರುಮೈಲ್ ಕ್ಯಾಂಪಿನ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ವೆಂಕಟಗಿರಿ ಕ್ಯಾಂಪಿನ ಸಿದ್ದಾಶ್ರಮದ ಸದಾನಂದ ಶರಣರು, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿದರು. ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಅಧ್ಯಕ್ಷತೆ ವಹಿಸಿದ್ದರು. ಆರ್‍ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಮುಖಂಡರಾದ ರಾಜೇಶ ಹಿರೇಮಠ, ತಿಮ್ಮಣ್ಣ ಸಾಹುಕಾರ, ಸರ್ವೋತ್ತಮರಡ್ಡಿ, ಎಂ.ಗಂಗಾಧರ್, ನಾಗವೇಣಿ ಪಾಟೀಲ್, ಯಂಕಯ್ಯ ಶ್ರೇಷ್ಠಿ, ನಿರುಪಾದಿ ಕೆ.ಗೋಮರ್ಸಿ ಉಪಸ್ಥಿತರಿದ್ದರು.

ಮೆರವಣಿಗೆ: ವಿಶ್ವ ರೈತ ದಿನಾಚರಣೇ ಅಂಗವಾಗಿ ತುಂಗಭದ್ರಾ ರಕ್ಷಣೆ ನಮ್ಮೆಲ್ಲರ ಹೊಣೆ ಜಾಗೃತಿ ಬಹೃತ್ ಸಮಾವೇಶ ಪ್ರಯುಕ್ತ ಮಂಗಳವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಆವರಣದಿಂದ ಆರಂಭಗೊಂಡ ಮೆರವಣಿಗೆಯು ಗಾಂಧಿ ವೃತ್ತ, ಬಸವೇಶ್ವರ ಸರ್ಕಲ್, ಬಾಬುಜಗಜೀವನರಾಮ್ ವೃತ್ತದ ಮೂಲಕ ಎಪಿಎಂಸಿ ಪ್ರಾಂಗಣದವರೆಗೆ ನಡೆಯಿತು. ಬಿಜೆಪಿ ಮುಖಂಡ ಕೆ.ಕರಿಯಪ್ಪ, ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸೇರಿ ನೂರಾರು ರೈತರ ಭಾಗವಹಿಸಿದ್ದರು.

ಸಿಂಧನೂರಿನಲ್ಲಿ ವಿಶ್ವ ರೈತ ದಿನಾಚರಣೆ ಅಂಗವಾಗಿ ತುಂಗಭದ್ರಾ ರಕ್ಷಣೆ ನಮ್ಮೆಲ್ಲರ ಹೊಣೆ ಜಾಗೃತಿ ಬಹೃತ್ ಸಮಾವೇಶ ಪ್ರಯುಕ್ತ ಮಂಗಳವಾರ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು
ರೈತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮತ್ತು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಉತ್ತರ ಭಾರತ ರೈತರ ಹೋರಾಟದ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ನಡೆಸುವುದು ಅನಿವಾರ್ಯ
ಕೆ.ವಿರೂಪಾಕ್ಷಪ್ಪ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.