ADVERTISEMENT

ಜಾಲಹಳ್ಳಿ: ಆಸ್ತಿ ಸಮೀಕ್ಷೆ ಕೆಲಸ ವಿಳಂಬ, ಪಿಡಿಒ ಸೇರಿ ಮೂವರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 16:01 IST
Last Updated 2 ನವೆಂಬರ್ 2023, 16:01 IST
ಜಾಲಹಳ್ಳಿ ಗ್ರಾಮ ಪಂಚಾಯತಿಗೆ ಗುರುವಾರ ತಾ.ಪಂ ಇ.ಒ ರಾಮರೆಡ್ಡಿ ಪಾಟೀಲ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು
ಜಾಲಹಳ್ಳಿ ಗ್ರಾಮ ಪಂಚಾಯತಿಗೆ ಗುರುವಾರ ತಾ.ಪಂ ಇ.ಒ ರಾಮರೆಡ್ಡಿ ಪಾಟೀಲ್ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು   

ಜಾಲಹಳ್ಳಿ: ‘ಗ್ರಾಮಗಳಲ್ಲಿ ಆಸ್ತಿ ಸಮೀಕ್ಷೆ ಮಾಡಿ ಕರವಸೂಲಿ ಮಾಡಿರುವ ಬಗ್ಗೆ ಸಮಗ್ರ ಮಾಹಿತಿ ನೀಡದೇ ಇರುವ ಗ್ರಾ.ಪಂ ಅಭಿವೃದ್ದಿ ಅಧಿಕಾರಿ‌ ಪತ್ಯಾಪ್ಪ ರಾಠೋಡ್ ಸೇರಿ ಮೂರು ಜನಕ್ಕೆ ನೋಟಿಸ್ ನೀಡಲಾಗಿದೆ’ ಎಂದು‌ ತಾ.ಪಂ‌ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ ಭೇಟಿ ನೀಡಿ ವಿವಿಧ ದಾಖಲೆ ಪರಿಶೀಲನೆ ಮಾಡಿ ಬಳಿಕ ಅವರು ಮಾತನಾಡಿದರು.

‘ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಆಸ್ತಿ ಸಮೀಕ್ಷೆ ಪ್ರಾರಂಭಗೊಂಡರೂ ಜಾಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಈವರೆಗೂ ಕರ ವಸೂಲಿ ಆರಂಭ ಮಾಡದೇ ಇರುವ ಪಿಡಿಒ ಸೇರಿ ಮೂರು ಸಿಬ್ಬಂದಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ತಿಳಿಸಿದ ಅವರು, ‘ಕರವಸೂಲಿ ಮಾಡಿರುವ ಬಗ್ಗೆ ಸಮಗ್ರ ಮಾಹಿತಿ ಇಡದೇ ಇರುವುದರಿಂದ ಅಭಿವೃದ್ದಿ ಅಧಿಕಾರಿ‌ ಪತ್ಯಾಪ್ಪ ರಾಠೋಡ್ ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬಡವರ ಹಾಗೂ ಶ್ರೀಮಂತರ ಮನೆಗಳ ಸ್ವರೂಪದ ಬಗ್ಗೆ ಪೋಟೋ ಸಮೇತ ವಿಶೇಷ ಪಾಸ್‌ಬುಕ್‌ನಲ್ಲಿ ದಾಖಲೆ ನೀಡಿ ಕರ ವಸೂಲಿ ಮಾಡಬೇಕು. ಇಲ್ಲಿಯ ವರೆಗೆ ಕೆಲಸ ಮಾಡದೇ ಇರುವುದು ಸರಿಯಾದ ಕ್ರಮ ಅಲ್ಲ. ಪಟ್ಟಣದಲ್ಲಿ ಜರುಗುವ ವಾರದ ಸಂತೆಯಲ್ಲಿ ಕರವಸೂಲಿಗೆ ವಾರ್ಷಿಕ ಟೆಂಡರ್ ಮುಗಿದು 6 ತಿಂಗಳು ಕಳೆದಿದೆ. ಇಲ್ಲಿವರೆಗೆ ಟೆಂಡರ್ ಮಾಡಿಲ್ಲ. ತಕ್ಷಣವೇ ಟೆಂಡರ್ ಕರೆಯಬೇಕು, ನರೇಗಾದಡಿ ಕೆಲಸ ಬಯಸಿ ಅರ್ಜಿ ಸಲ್ಲಿಸಿದ ಕೂಲಿಕಾರರಿಗೆ ತಕ್ಷಣವೇ ಕೆಲಸ ನೀಡಬೇಕು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಡಿಒ ಪತ್ಯಾಪ್ಪ ರಾಠೋಡ್, ಲೆಕ್ಕಾಧಿಕಾರಿ ಅಯ್ಯಪ್ಪ, ಕರ ವಸೂಲಿಗಾರರಾದ ಮುದ್ದರಂಗಪ್ಪ ನಾಯಕ, ಯಂಕೋಬ ಪಲಕನಮರಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.