ADVERTISEMENT

ಮಾನ್ವಿ: ತರಗತಿ‌ ನಿರ್ವಹಣೆಗೆ ಕೊಠಡಿ ಕೊರತೆ

ಮಾನ್ವಿ: ಮೊರಾರ್ಜಿ ದೇಸಾಯಿ ವಸತಿ ಸಹಿತ ಪಿಯು ಕಾಲೇಜು

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 6:07 IST
Last Updated 24 ಜುಲೈ 2025, 6:07 IST
ಮಾನ್ವಿ ಪಟ್ಟಣದ ಮುಷ್ಟೂರು ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ
ಮಾನ್ವಿ ಪಟ್ಟಣದ ಮುಷ್ಟೂರು ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ   

ಮಾನ್ವಿ: ಪಟ್ಟಣದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ‌ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿಗಳ ವಸತಿ ಹಾಗೂ ತರಗತಿಗಳ ನಿರ್ವಹಣೆಗೆ ಕೊಠಡಿಗಳ ಕೊರತೆ ಉಂಟಾಗಿದೆ.

ರಾಜ್ಯ ಸರ್ಕಾರ 2023-24ನೇ ಶೈಕ್ಷಣಿಕ ವರ್ಷದಿಂದ ಈ ವಸತಿ ಶಾಲೆಯನ್ನು ಮೇಲ್ದರ್ಜೆಗೇರಿಸಿ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿತ್ತು. ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಕ್ಕೆ ತಲಾ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಿತ್ತು.

ಕಾಲೇಜು ಆರಂಭದ ಮೊದಲ ವರ್ಷ ವಿಜ್ಞಾನ ವಿಭಾಗಕ್ಕೆ ಕೇವಲ 7 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದರು. ಪ್ರಸಕ್ತ ವರ್ಷ ವಿಜ್ಞಾನ ವಿಭಾಗದ ಪ್ರಥಮ ಪಿಯುಸಿ 18 ಹಾಗೂ ದ್ವಿತೀಯ ಪಿಯುಸಿ 20 ವಿದ್ಯಾರ್ಥಿಗಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜು ಆರಂಭವಾಗಿ ಮೂರು ವರ್ಷಗಳಾದರೂ ವಾಣಿಜ್ಯ ವಿಭಾಗವನ್ನು ಇನ್ನೂ ಆರಂಭಿಸಿಲ್ಲ.

ADVERTISEMENT

ವಿಜ್ಞಾನ ವಿಭಾಗದ ಬೋಧನೆಗೆ 6 ಜನ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿದೆ. ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ತರಗತಿಯ ಕೊಠಡಿಗಳು ಹಾಗೂ ವಸತಿ ಸೌಲಭ್ಯ ಇಲ್ಲ. ಈಗಿರುವ ವಸತಿ ಶಾಲೆಯ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಬಾಲಕರ ಹಾಸ್ಟೆಲ್‌ನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇರುವ ಕಾರಣ ಈ ಬಾರಿ 2025-26ನೇ ಶೈಕ್ಷಣಿಕ ವರ್ಷಕ್ಕೆ ಬಾಲಕರಿಗೆ ಪಿಯುಸಿ ತರಗತಿಗೆ ಪ್ರವೇಶಾವಕಾಶ ನೀಡಿಲ್ಲ. ಬಾಲಕಿಯರಿಗೆ ಮಾತ್ರ ಪ್ರಥಮ ಪಿಯುಸಿ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, 18 ವಿದ್ಯಾರ್ಥಿನಿಯರು ಇದ್ದಾರೆ. ಕೊಠಡಿಗಳ ಕೊರತೆ ಇರುವ ಕಾರಣ ವಸತಿ ಶಾಲೆಯ ಕಂಪ್ಯೂಟರ್ ಪ್ರಯೋಗಾಲಯಗಳಲ್ಲಿ ಕಾಲೇಜಿನ ತರಗತಿಗಳನ್ನು ನಡೆಸಲಾಗುತ್ತಿದೆ.

ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸುಸಜ್ಜಿತ ಪ್ರಯೋಗಾಲಯ, ತರಗತಿ ಕೊಠಡಿ ಮತ್ತಿತರ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಪಾಲಕರೂ ಸಹ ಈ ಕಾಲೇಜಿನಲ್ಲಿ ತಮ್ಮ ಮಕ್ಕಳ ಪ್ರವೇಶಕ್ಕೆ ಹಿಂದೇಟು ಹಾಕುವಂತಾಗಿದೆ. ಪಿಯುಸಿ ವಿಜ್ಞಾನ ಕಲಿಯಲು ಗಾಮೀಣ ಪ್ರದೇಶಗಳ ಮಕ್ಕಳಿಗೆ ವರದಾನವಾಗಬೇಕಿದ್ದ ಈ ಕಾಲೇಜು ಇದ್ದೂ ಇಲ್ಲದಂತಾಗಿದೆ.

ಸದರಿ ವಸತಿ ಶಾಲೆಯ ಆವರಣದಲ್ಲಿ ಪದವಿ ಪೂರ್ವ ಕಾಲೇಜು ವಿಭಾಗಕ್ಕೆ ಪ್ರತ್ಯೇಕ ಕಟ್ಟಡ ಹಾಗೂ ಹಾಸ್ಟೆಲ್ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂದು ಪಾಲಕರು ಮನವಿ ಮಾಡಿದ್ದಾರೆ.

ಕಂಪ್ಯೂಟರ್ ಪ್ರಯೋಗಾಲಯದಲ್ಲಿ ತರಗತಿಗಳ ನಿರ್ವಹಣೆ | ಮಕ್ಕಳ ಪ್ರವೇಶಕ್ಕೆ ಪಾಲಕರ ಹಿಂದೇಟು |ಆರಂಭವಾಗದ ವಾಣಿಜ್ಯ ವಿಭಾಗ
ಪಿಯು ಕಾಲೇಜು ತರಗತಿಗಳ‌ ನಿರ್ವಹಣೆಗೆ ಕೊಠಡಿ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ
ವೆಂಕಟೇಶ ನಾಯಕ ಪ್ರಾಂಶುಪಾಲ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾನ್ವಿ
ಅಧಿಕಾರಿಗಳು ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚುವರಿ ಕೊಠಡಿ ಸುಸಜ್ಜಿತ ಪ್ರಯೋಗಾಲಯ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕು
ಶೇಖ್ ಬಾಬಾ ಹುಸೇನ್ ತಾಲ್ಲೂಕು ಅಧ್ಯಕ್ಷ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.