ADVERTISEMENT

35,560 ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಆಯುಕ್ತ

ನಗರ ಪೋಲಿಯೊ ಲಸಿಕೆ ಕಾರ್ಯಪಡೆ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:04 IST
Last Updated 17 ಡಿಸೆಂಬರ್ 2025, 7:04 IST
ರಾಯಚೂರಿನ ಮಹಾನಗರಪಾಲಿಕೆ ಕಚೇರಿಯಲ್ಲಿ ಮಂಗಳವಾರ ನಡೆದ ನಗರ ಪೋಲಿಯೊ ಲಸಿಕೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಆಯುಕ್ತ ಜುಬಿನ್‌ ಮೊಹಾಪಾತ್ರ ಮಾತನಾಡಿದರು
ರಾಯಚೂರಿನ ಮಹಾನಗರಪಾಲಿಕೆ ಕಚೇರಿಯಲ್ಲಿ ಮಂಗಳವಾರ ನಡೆದ ನಗರ ಪೋಲಿಯೊ ಲಸಿಕೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ಆಯುಕ್ತ ಜುಬಿನ್‌ ಮೊಹಾಪಾತ್ರ ಮಾತನಾಡಿದರು   

ರಾಯಚೂರು: ನಗರದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನದಡಿ ಡಿ.21ರಿಂದ 24ರವರೆಗೆ ಐದು ವರ್ಷದೊಳಗಿನ 35,560 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕೆ ನಿಯೋಜನೆಗೊಂಡ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಸೂಚಿಸಿದರು.

ನಗರದ ಹಳೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಪಲ್ಸ್ ಪೋಲಿಯೊ ನಗರ ಕಾರ್ಯಪಡೆ ಸಮಿತಿ ಸಭೆಯ ಆಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಗರ ಪ್ರದೇಶಗಳಲ್ಲಿ ಒಟ್ಟು 143 ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. 9 ಟ್ರಾಂಜಿಟ್ ಹಾಗೂ 6 ಸಂಚಾರಿ ತಂಡ ರಚಿಸಲಾಗಿದೆ. ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಒಟ್ಟು 286 ವ್ಯಾಕ್ಸಿನೆಟರ್ಸ್, 31 ಮೇಲ್ವಿಚಾರಕರಿದ್ದಾರೆ. ರಾಯಚೂರು ನಗರದಲ್ಲಿ ಒಟ್ಟು 62,685 ಮನೆಗಳನ್ನು ಲಸಿಕಾ ಅಭಿಯಾನದಡಿ ಸಂದರ್ಶಿಸುವ ಗುರಿ ಹೊಂದಲಾಗಿದೆ’ ಎಂದು ಆಯುಕ್ತರು ತಿಳಿಸಿದರು.

ADVERTISEMENT

‘ಭಾನುವಾರ ಕುಟುಂಬದ ಸದಸ್ಯರೆಲ್ಲರೂ ಮನೆಯಲ್ಲಿ ಇರುವುದರಿಂದ ಇಂದಿನಿಂದಲೇ ನಗರಪಾಲಿಕೆಯ ತ್ಯಾಜ್ಯ ವಿಲೇವಾರಿ ವಾಹನದ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಬೇಕು. ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್‌ ಅಳವಡಿಸಬೇಕು. ವಾಟ್ಸ್ಅಪ್, ಫೇಸ್‌ಬುಕ್, ಎಕ್ಸ್ ಸೇರಿದಂತೆ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕು’ ಎಂದು ಹೇಳಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ ಎಂ.ಎನ್., ಪಾಲಿಕೆ ಆರೋಗ್ಯಾಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಹಿಯುದ್ದಿನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್‌ಕುಮಾರ, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ, ಪರಿಸರ ಎಂಜಿನಿಯರ್ ಜಯಪಾಲ್ ರೆಡ್ಡಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಬಿಎಚ್ಇಒ, ಸರೋಜಾ ಕೆ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಸುರೇಶ, ಕ್ಷೇತ್ರ ಲಸಿಕಾ ಮೇಲ್ವಿಚಾರಕ ಕೋಪ್ರೇಶ್, ಡಿಡಿಎಂ ಲೋಕೇಶ, ಮಹಾನಗರಪಾಲಿಕೆ ವಾಹನ ವಿಭಾಗದ ವೆಂಕಟೇಶ ಕುಲಕರ್ಣಿ ಹಾಗೂ ಪಾಲಿಕೆ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.