ADVERTISEMENT

ರಾಯಚೂರು: ಹೆಚ್ಚುತ್ತಿದ್ದಾರೆ ಬಾಲಗರ್ಭಿಣಿಯರು...

ಚಂದ್ರಕಾಂತ ಮಸಾನಿ
Published 30 ಜುಲೈ 2025, 22:58 IST
Last Updated 30 ಜುಲೈ 2025, 22:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಯಚೂರು: ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ ಬಾಲಗರ್ಭಿಣಿಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇರುವುದು ಆತಂಕ ಮೂಡಿಸಿದೆ. 

2019ರಲ್ಲಿ 189 ಇದ್ದ ಬಾಲಗರ್ಭಿಣಿಯರ ಸಂಖ್ಯೆ 2024–25ರಲ್ಲಿ 379ಕ್ಕೆ ಹೆಚ್ಚಿದೆ. ಪಾಲಕರು ಗೋಪ್ಯವಾಗಿ ನಡೆಸುತ್ತಿರುವ ಬಾಲ್ಯವಿವಾಹ ಹಾಗೂ ಹರಯದಲ್ಲೇ ಮೂಡುವ ದೈಹಿಕ ಆಕರ್ಷಣೆಯೂ ಇದಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ADVERTISEMENT

2024–25ರಲ್ಲಿ ದೇವದುರ್ಗ, ಮಾನ್ವಿ, ಸಿಂಧನೂರು ತಾಲ್ಲೂಕಿನಲ್ಲಿ 13 ವರ್ಷ ವಯಸ್ಸಿನ ತಲಾ ಒಬ್ಬರು ಗರ್ಭಿಣಿಯಾಗಿರುವುದು ಗೊತ್ತಾಗಿದೆ. ದೇವದುರ್ಗದಲ್ಲಿ 3, ಲಿಂಗಸುಗೂರು, ಮಾನ್ವಿಯಲ್ಲಿ ತಲಾ ಒಬ್ಬರು 14 ವರ್ಷದ ಬಾಲಕಿಯರು; ದೇವದುರ್ಗದಲ್ಲಿ 17, ಲಿಂಗಸುಗೂರಿನಲ್ಲಿ 10, ಮಾನ್ವಿಯಲ್ಲಿ 2 ಹಾಗೂ ರಾಯಚೂರು ತಾಲ್ಲೂಕಿನಲ್ಲಿ ಆರು ಬಾಲಕಿಯರು 15ನೇ ವರ್ಷದಲ್ಲೇ ತಾಯಿಯಾಗಿದ್ದಾರೆ.

ದೇವದುರ್ಗ ತಾಲ್ಲೂಕಿನಲ್ಲಿ 44, ಲಿಂಗಸುಗೂರಿನಲ್ಲಿ 26, ಮಾನ್ವಿಯಲ್ಲಿ 6, ರಾಯಚೂರು ತಾಲ್ಲೂಕಿನಲ್ಲಿ 4, ಸಿಂಧನೂರು ತಾಲ್ಲೂಕಿನಲ್ಲಿ 7 ಬಾಲಕಿಯರು 16 ವರ್ಷದಲ್ಲೇ ಗರ್ಭಧರಿಸಿದ್ದಾರೆ. ದೇವದುರ್ಗ ತಾಲ್ಲೂಕಿನಲ್ಲಿ 106, ಲಿಂಗಸುಗೂರು 64, ಮಾನ್ವಿ 34, ರಾಯಚೂರು 22, ಸಿಂಧನೂರು ತಾಲ್ಲೂಕಿನಲ್ಲಿ 23 ಸೇರಿ ಒಟ್ಟು 249 ಬಾಲಕಿಯರು (17ವರ್ಷದವರು) ಗರ್ಭವತಿಯರಾಗಿದ್ದಾರೆ.

ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದಾಗ, ಅವರು ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಒಪ್ಪಿಸಿದ್ದಾರೆ.

ದೇವದುರ್ಗದಲ್ಲಿ ಅಧಿಕ: ಬಾಲಗರ್ಭಿಣಿಯರ ಸಂಖ್ಯೆ ದೇವದುರ್ಗ ತಾಲ್ಲೂಕಿನಲ್ಲಿ ಹೆಚ್ಚುತ್ತಿದೆ. ‘ಒಂದು ವರ್ಷದಲ್ಲಿ 90 ಪ್ರಕರಣ ದಾಖಲಿಸಲಾಗಿದೆ. 12 ಮಂದಿಗೆ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ’ ಎನ್ನುತ್ತಾರೆ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿ ಅಮರೇಶ ಹಾವಿನ್‌.

‘ಬಾಲಕಿಯರು ಗರ್ಭಿಣಿ ಆಗಿರುವ ವಿಷಯದಲ್ಲಿ ದೂರುಗಳು ಬಾರದ ಕಾರಣ ಕಠಿಣ ಕ್ರಮ ಜರುಗಿಸಲು ತೊಡಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.