
ಬಂಧನ
(ಸಾಂದರ್ಭಿಕ ಚಿತ್ರ)
ರಾಯಚೂರು: ಜಿಲ್ಲಾಧಿಕಾರಿ ನಿತೀಶ್‌ಕುಮಾರ ಅವರ ಭಾವಚಿತ್ರವಿರುವ ನಕಲಿ ಫೇಸ್‌ಬುಕ್ ಐಡಿ ಸೃಷ್ಟಿಸಿ ಇಬ್ಬರನ್ನು ವಂಚಿಸಿದ್ದ ರಾಜಸ್ಥಾನ ಮೂಲದ ಯುವಕನನ್ನು ರಾಯಚೂರು ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಕರೋಲ್‌ನ ಚಂದಬಾಸ್ ಚಿರ್‌ಜಾನಾ ನಿವಾಸಿ ಖಾಸಗಿ ಕಂಪನಿಯಲ್ಲಿ ಲೋಡಿಂಗ್ ಕೆಲಸ ಮಾಡುವ ಶಕೀಲ್ ಜೈಕಾಮ್ (19) ಎನ್ನುವವನನ್ನು ಬಂಧಿಸಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ವಶಕ್ಕೆ ಕೊಡಲಾಗಿದೆ.
ಆರೋಪಿಯು ಜಿಲ್ಲಾಧಿಕಾರಿ ನಿತೀಶ್‌ಕುಮಾರ ಅವರ ಭಾವಚಿತ್ರವಿರುವ ನಕಲಿ ಫೇಸ್‌ಬುಕ್ ಐಡಿ ಸೃಷ್ಟಿಸಿ ದೇವದುರ್ಗ ತಾಲ್ಲೂಕಿನ ಅರಕೇರಾದ ರಮೇಶ ಚೆನ್ನಪ್ಪ ಹೇಮನೂರು ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಕಲಬುರಗಿ ಏರ್‌ಪೋರ್ಟ್‌ನಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿರುವ ಅಜೀತ್‌ಸಿಂಗ್ ಅವರಿಗೂ ಕಡಿಮೆ ಬೆಲೆಯಲ್ಲಿ ಗೃಹೋಪಯೋಗಿ ಬಳಕೆಯ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದು, ಅವರನ್ನು ಸಂಪರ್ಕಿಸಿ ಸಾಮಗ್ರಿ ಖರೀದಿಸುವಂತೆ ನಂಬಿಸಿದ್ದ.
ಜೂನ್ 27ರಿಂದ 29ರ ಅವಧಿಯಲ್ಲಿ ₹ 80,500 ಪಡೆದು ರಮೇಶ ಚೆನ್ನಪ್ಪ ಹಾಗೂ ಆತನ ಗೆಳೆಯ ರಾಘವೇಂದ್ರನಿಗೆ ಮೋಸ ಮಾಡಿದ್ದ. ಮೋಸ ಹೋಗಿರುವುದು ಮನವರಿಕೆಯಾದ ನಂತರ ರಮೇಶ ಅವರು ಜೂನ್ 30ರಂದು ರಾಯಚೂರು ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸೈಬರ್ ಅಪರಾಧ ಠಾಣೆಯ ಡಿವೈಎಸ್‌ಪಿ ವೆಂಕಟೇಶ ಹೊಗಿಬಂಡಿ ನೇತೃತ್ವದಲ್ಲಿ ಅಧಿಕಾರಿಗಳು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.