
ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಪ್ರಯುಕ್ತ ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಹೆಲಿಕಾಪ್ಟರ್ ರೈಡ್ ಆರಂಭವಾಯಿತು.
ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು ಚಾಲನೆ ನೀಡಿದರು. ಬಳಿಕ ಮೊದಲ ರೈಡ್‌ನಲ್ಲಿಯೇ ಕಿಲ್ಲೆ ಬೃಹನ್ಮಠದ ಶಾಂತಮಲ್ಲಾ ಶಿವಾಚಾರ್ಯರು, ಫಾದರ್ ಯುವರಾಜ, ಜಾಮಿಯಾ ಮಸೀದಿಯ ಇಮಾಂ ಮಹಮ್ಮದ್ ಹಾಫಿಜ್ ಮೊಹಮ್ಮದ್ ಅನ್ವರಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಮಿತಾ ಅವರು ಮೊದಲ ಪ್ರಯಾಣ ಮಾಡುವ ಮೂಲಕ ರಾಯಚೂರು ಜಿಲ್ಲೆಯ ಜನತೆಗೆ ಭಾವೈಕ್ಯದ ಸಂದೇಶ ಸಾರಿದರು.
ಜಿಲ್ಲಾಧಿಕಾರಿ ನಿತಿಶ್.ಕೆ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪವನಕುಮಾರ ಪಾಟೀಲ, ಅಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಪಾಲ್ಗೊಂಡು ಶುಭಕೋರಿದರು.
ಕೆಲವರು ತಮ್ಮ ಮನೆಯ ಹಿರಿಯರನ್ನು ಕರೆತಂದು ಹೆಲಿಕಾಪ್ಟರ್‌ನಲ್ಲಿ ಪ್ರವಾಸ ಮಾಡಿಸಿದರು. ನಗರದ ಸ್ಟೇಷನ್ ಬಜಾರ್ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಶಾಲೆಯ ಆಯ್ದ ಮಕ್ಕಳ ಜತೆಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡಿ ಮಕ್ಕಳೊಂದಿಗೆ ಸಂತಸ ಹಂಚಿಕೊಂಡರು.
ಮೊದಲ ಬಾರಿಗೆ ಹೆಲಿಕಾಪ್ಟರ್ ಏರಿ ಆಗಸದಲ್ಲಿ ತೇಲಾಡಿ ರಾಯಚೂರು ನಗರ ಪ್ರದಕ್ಷಿಣೆ ಹಾಕಿ ಭೂಮಿ ಮೇಲೆ ಇಳಿದು ಮಕ್ಕಳು ಖುಷಿಯಿಂದ ಕೇಕೆ ಹಾಕಿ ಸಂಭ್ರಮಿಸಿದರು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಹೆಲಿಕಾಪ್ಟರ್ ರೈಡ್ ಸಂಜೆಯವರೆಗೂ ನಡೆದಿತ್ತು. ಕ್ರೀಡಾಂಗಣದ ಸುತ್ತ ಭಾರಿ ಸಂಖ್ಯೆಯಲ್ಲಿ ಮಕ್ಕಳು ನೆರೆದು ಹೆಲಿಕಾಪ್ಟರ್ ಹಾರಾಡುವುದನ್ನು ನೋಡಿ ಕಣ್ತುಂಬಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.