
ಸಿಡಿಮದ್ದು ಪ್ರದರ್ಶನಕ್ಕೆ ಸಕಲ ವ್ಯವಸ್ಥೆ | ಮುಖ್ಯ ವೇದಿಕೆ ಬಳಿ ರಾತ್ರಿ ಲೇಸರ್ ಶೋ | ಎಲ್ಲ ಬಗೆಯ ಉಪಾಹಾರದ ಮಳಿಗೆ ಸ್ಥಾಪನೆ
ರಾಯಚೂರು: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಬಿಸಿಲ ನಗರಿ ಅಣಿಯಾಗಿದೆ. ಅಲಂಕಾರಿಕ ದೀಪಗಳು, ಸುಣ್ಣ–ಬಣ್ಣ, ಗೋಡೆಗಳ ಮೇಲೆ ಆಕರ್ಷಕ ಪೇಂಟಿಂಗ್ ಹಾಗೂ ಬಂಟಿಂಗ್ಸ್‌ನ ತಳಿರು ತೋರಣಗಳಿಂದ ನಗರ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ದೇವಸ್ಥಾನಗಳು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿವೆ. ವರ್ಣರಂಜಿತ ವಿದ್ಯುತ್ ದೀಪಗಳು ರಾತ್ರಿಯ ಹೊತ್ತು ನಗರದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
ಹೊರ ಜಿಲ್ಲೆ ಹಾಗೂ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದ ಸಂಜೆ ನಗರ ಪ್ರವೇಶಿಸುತ್ತಿರುವ ಜನರು ಹಾಗೂ ಪ್ರವಾಸಿಗರಲ್ಲಿ ಕುತೂಹಲ ಮೂಡಿಸುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ಜನ ಮನೆಗಳಿಂದ ಕುಟುಂಬದ ಸದಸ್ಯರೊಂದಿಗೆ ಹೊರಬಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಗಮಿಸ ತೊಡಗಿದ್ದಾರೆ.
ಉತ್ಸವದ ಸಂಭ್ರಮ ಇಮ್ಮಡಿಗೊಳಿಸಲು ಜಿಲ್ಲಾಡಳಿತ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಹಾರ ಮೇಳ ಆಯೋಜಿಸಿ 100 ಮಳಿಗೆಗಳನ್ನು ತೆರೆದಿದೆ. ವೈವಿಧ್ಯಮಯ ಐಸ್‌ಕ್ರೀಮ್ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. 12 ಜಿಲ್ಲೆಗಳ ಸ್ವ–ಸಹಾಯ ಸಂಘಗಳು ತಯಾರಿಸಿದ ಕರಕುಶಲ ಸಾಮಗ್ರಿಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ.
ಐದು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಗೋಷ್ಠಿ, ವಿಚಾರಗೋಷ್ಠಿಗಳು ನಡೆಯುವ ಕಾರಣ ತಾಲ್ಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಗಳಿಗೆ ಬಂದು ಹೋಗಲು ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಸಂಚಾರ ಮಾರ್ಗ ಬದಲಿಸಲಾಗಿದೆ. ಖಾಸಗಿ ವಾಹನಗಳ ನಿಲುಗಡೆಗೆ ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಲಕ್ಷಾಂತರ ಜನ ಬಂದು ಹೋಗುವ ಕಾರಣ ಮುಖ್ಯ ವೇದಿಕೆಯ ಬಳಿ 100 ಮೊಬೈಲ್ ಶೌಚಾಲಯಗಳ ಸ್ಥಾಪನೆ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಸಹ ಮಾಡಲಾಗಿದೆ. ಬಿಸಿಲು ಹೆಚ್ಚಿರುವ ಕಾರಣ ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಜಿಲ್ಲೆಯ ಮೂಲೆ ಮೂಲೆಗಳಿಂದ ಜನ ಬರುವಂತಾಗಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ಪ್ರತಿ ತಾಲ್ಲೂಕು ಹಾಗೂ ಸಮಿತಿಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಿ ಮೇಲ್ವಿಚಾರಣೆ ನಡೆಸಿದೆ.
ಜಿಲ್ಲಾಧಿಕಾರಿ ನಿತೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಭಜಂತ್ರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಅವರೇ ನೇರವಾಗಿ ಉತ್ಸವದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಕಾರಣ ಪ್ರಾಥಮಿಕ ಹಂತದಲ್ಲಿ ಯಾವುದೇ ಸಮಸ್ಯೆಗಳು ಎದುರಾಗಿಲ್ಲ. ಎಲ್ಲವೂ ಸುಸೂತ್ರವಾಗಿ ಸಾಗಿದೆ.
ಅರಣ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಆರೋಗ್ಯ ಇಲಾಖೆ, ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ದಿನಗಳ ಉತ್ಸವದ ಯಶಸ್ಸಿಗೆ ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ರಾಯಚೂರು ಜಿಲ್ಲಾಡಳಿತದ ವತಿಯಿಂದ ಹಲವು ಸಮಿತಿಗಳನ್ನು ರಚಿಸಿಕೊಂಡು ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮ್ಯಾರಥಾನ್ ಸೈಕ್ಲೊಥಾನ್ ಹಾಗೂ ದೇಹದಾರ್ಢ್ಯ ಸ್ಪರ್ಧೆ ಯಶಸ್ವಿಯಾಗಿ ನಡೆದಿದೆನಿತೀಶ್ ಕೆ. ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.