ADVERTISEMENT

ರಾಯಚೂರು | ಬೆಳೆ ನಷ್ಟ ಪರಿಹಾರ ಕೊಡಲು ಒತ್ತಾಯ: ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 6:15 IST
Last Updated 14 ಅಕ್ಟೋಬರ್ 2025, 6:15 IST
ಅತಿವೃಷ್ಟಿಯಿಂದಾದ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ರಾಯಚೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಅತಿವೃಷ್ಟಿಯಿಂದಾದ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ರಾಯಚೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ರಾಯಚೂರು: ಅತಿವೃಷ್ಟಿಯಿಂದಾದ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಇಲ್ಲಿಯ ಹಳೆಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಎಪಿಎಂಸಿ ಆವರಣದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಘೋಷಣೆಗಳನ್ನು ಕೂಗುತ್ತ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ನಂತರ ಗೇಟ್‌ ಬಳಿಗೆ ಕುಳಿತು ಧರಣಿ ಮಾಡಿದರು.

‘ಜಿಲ್ಲೆಯಲ್ಲಿ ತರಕಾರಿ ಬೆಳೆಗಳ ಪ್ರತ್ಯೇಕ ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು. ರೈತರ ಹೊಲಗಳಿಗೆ ಹೋಗುವ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ರೈತರು ಸಹಕಾರಿ ಬ್ಯಾಂಕ್‌ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಪಾವತಿಸುವಂತೆ ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಬೇಕು. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಸರ್ಕಾರ ನಿಗದಿಪಡಿಸಿದ ದರದಂತೆ ಉತ್ಪನ್ನಗಳನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಬೇಕು’ ಎಂದು ಆಗ್ರಹಿಸಿದರು.

‘ನಾರಾಯಣಪುರ ಬಲದಂಡೆ ಕಾಲುವೆಗಳಲ್ಲಿ 95ರಿಂದ 168 ಕಿ.ಮೀ ವಿಸ್ತರಣೆಯಾಗಿದೆ. ರೈತರ ಜಮೀನುಗಳಲ್ಲಿ ಕಾಲುವೆ ತೋಡಿದರೂ ಪರಿಹಾರ ಬಂದಿಲ್ಲ. ಭೂಮಿ ಕಳೆದುಕೊಂಡವರಿಗೆ ನೀರು ಸಹ ಸಿಕ್ಕಿಲ್ಲ. ಕೃಷಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ಕೊಡಬೇಕು. ನೀರಿನ ಸೌಲಭ್ಯ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

‘ಹತ್ತಿ ವ್ಯಾಪಾರಸ್ಥರು ಬೆಲೆ ನಿಗದಿಪಡಿಸಿದ ನಂತರ ಪುನಃ ಹತ್ತಿಯನ್ನು ಆನ್‌ಲೋಡ್‌ ಮಾಡುವಾಗ ಬೆಲೆ ಕಡಿಮೆ ಮಾಡಲಾಗುತ್ತಿದೆ. ಕ್ವಿಂಟಲ್‌ಗೆ 1 ಕೆ.ಜಿ. ಸೂಟ್‌ ತೆಗೆಯುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಎನ್‌.ಲಕ್ಷ್ಮಣಗೌಡ ಕಡಗಂದೊಡ್ಡಿ, ಜಿಲ್ಲಾ ಅಧ್ಯಕ್ಷ ಅಬ್ದುಲ್‌ ಮಜೀದ್‌, ರಾಜ್ಯ ಸಮಿತಿ ಸದಸ್ಯ ನರಸಿಂಗರಾವ ಕುಲಕರ್ಣಿ, ರಂಗನಾಥ ಪಾಟೀಲ, ವೀರೇಶ ಗೌಡ, ಬಾಪೂರು ತಿಮ್ಮಪ್ಪ, ದೇವಪ್ಪ ಜೇಗರಕಲ್, ಮೆಹಬೂಬ ನೆಲಹಾಳ, ಚಾಂದಸಾಬ, ಇಬ್ರಾಹಿಂ ಮಾಸದೊಡ್ಡಿ, ಹುಲಿಗೆಪ್ಪ ಜಾಲಿಬೆಂಚಿ, ರಮೇಶ ಗಾಣದಾಳ, ಈರಣ್ಣ ಕೋರ್ಕಲ್, ಮಲ್ಲಿಕಾರ್ಜುನ, ನರಸಪ್ಪ ರಳ್ಳದೊಡ್ಡಿ, ಖಾಸೀಂ ಮಮದಾಪುರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.