ರಾಯಚೂರು: ‘ಕನ್ನಡ ಸಾಹಿತ್ಯದಲ್ಲಿ ಗಜಲ್ ಸಾಹಿತ್ಯ ಪರಂಪರೆ ಹುಟ್ಟಿದ್ದು ರಾಯಚೂರು ಜಿಲ್ಲೆಯಲ್ಲಿ, ಜಿಲ್ಲೆಯವರೇ ಆದ ಶಾಂತರಸರು ಗಜಲ್ ಸಾಹಿತ್ಯದ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಲು ಯತ್ನಿಸಿದ್ದಾರೆ‘ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿಯ ಸದಸ್ಯೆ ಜೈದೇವಿ ಗಾಯಕವಾಡ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ ಸುರೇಶ ಬಾಬು ಅವರ ‘ದಾರಿ ತೋರಿದ ಕಂದಿಲು’ ಗಜಲ್ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
‘ಶಾಂತರಸರು ಗಜಲ್ ಸಾಹಿತ್ಯದ ಮೂಲಕ ಪ್ರೀತಿ, ಪ್ರೇಮ, ಸಾಮಾಜಿಕ ಪಿಡುಗು, ಅಸಮಾನತೆಯ ವಿರುದ್ಧ ಹೋರಾಡಿದ್ದಾರೆ. ಇಂದು ಅನೇಕ ಸಾಹಿತಿಗಳು ಗಜಲ್ ಸಾಹಿತ್ಯದಲ್ಲಿ ಹೆಸರುವಾಸಿಯಾಗಿದ್ದಾರೆ. ಇವರ ಸಾಲಿಗೆ ಈಗ ಸುರೇಶ ಬಾಬು ಸೇರಿದ್ದಾರೆ. ಈ ಕೃತಿಯಲ್ಲಿ 60 ಗಜಲ್‌ಗಳಿವೆ‘ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ‘ಸಾಹಿತಿಗಳು ಸಮಾಜಮುಖಿಯಾಗಬೇಕು. ಸಮಾಜದ ಕಣ್ಣು, ಕಿವಿಗಳಾಗಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮಾರ್ಗದರ್ಶಕರಾಗಬೇಕು‘ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪರಿಸರ ಪ್ರೇಮಿ ಪ್ರಶಸ್ತಿ ಪುರಸ್ಕೃತ ಈರಣ್ಣ ಕೋಸಗಿ ದಂಪತಿಯನ್ನು ಸನ್ಮಾನಿಸಲಾಯಿತು.
ಬೀದರ್ ದಮ್ಮದೀಪ ಬಂತೇಜಿ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ, ಅಬ್ದುಲ್ ಹೈ ತೋರಣಗಲ್, ನಂದಿನಿ ಸ್ಮರಕ ಶಿಕ್ಷಣ ಸಂಸ್ಥೆಯ ಸದಸ್ಯ ಡಾ.ಬಿ. ಮಹಾಲಿಂಗ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿ ಜಾಗೃತಿ ದೇಶಮಾನೆ, ಅಯ್ಯಪ್ಪಯ್ಯ ಹುಡಾ, ವಿ.ಎನ್ ಅಕ್ಕಿ, ಆಂಜನೇಯ ಜಾಲಿಬೆಂಚಿ, ಭಗತ್ ರಾಜ್ ನಿಜಾಮಕಾರಿ, ಬಷೀರ್ ಅಹ್ಮದ್ ಹೊಸಮನಿ, ಕೃತಿಕಾರ ಸುರೇಶ ಬಾಬು ಉಪಸ್ಥಿತರಿದ್ದರು.
ದೇವೆಂದ್ರಮ್ಮ ಪ್ರಾರ್ಥಿಸಿದರು. ರಾವುತ್ ರಾವ್ ಬರೂರ್ ಸ್ವಾಗತಿಸಿದರು. ವಿಜಯರಾಜೇಂದ್ರ ನಿರೂಪಿಸಿದರು. ಶಿವರಾಜ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.