
ರಾಯಚೂರು: ‘ಕುವೆಂಪು ಬರಹಗಾರರಷ್ಟೇ ಅಲ್ಲ, ಸಮಾಜವನ್ನು ಮೌಲ್ಯಾತ್ಮಕವಾಗಿ ಕಟ್ಟಲು ಬೇಕಾದ ವಿಚಾರಧಾರೆ’ ಎಂದು ಸಾಹಿತಿ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ‘ಕುವೆಂಪು ಚಿಂತನೆಗಳ ಸಮಕಾಲೀನತೆ’ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಚರಿತ್ರೆಯ ಗಾಲಿಗಳನ್ನು ಮೌಢ್ಯದ ಮೂಲಕ ಹಿಂದಕ್ಕೆ ಎಳೆಯುವವರು ಇರುವಾಗ ಕುವೆಂಪುವಿನಂಥ ಮಹತ್ವದ ಬರಹಗಾರರು ಚರಿತ್ರೆಯ ಗಾಲಿಗಳನ್ನು ಮುಂದಕ್ಕೆ ಒಯ್ಯಬಲ್ಲರು. ಅವರು ಸಾಮಾನ್ಯ ಅನ್ನುವುದಿಲ್ಲ, ಬದಲಾಗಿ ಶ್ರೀಸಾಮಾನ್ಯ ಅನ್ನುತ್ತಾರೆ. ರೈತರಿಗೆ ನೇಗಿಲಯೋಗಿ ಅನ್ನುತ್ತಾರೆ. ಇದು ಕುವೆಂಪು ಅವರ ಕಾಳಜಿ’ ಎಂದು ವಿಶ್ಲೇಷಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ‘ಕುವೆಂಪು ಒಂದು ಪ್ರಜ್ಞೆಯಾಗಿ, ಅರಿವಾಗಿ ನಮಗೆ ಗೋಚರವಾಗುತ್ತಾರೆ‘ ಎಂದು ತಿಳಿಸಿದರು.
‘ಕುವೆಂಪು ವಿಚಾರಧಾರೆ ನವೋದಯ, ನವ್ಯ, ದಲಿತ-ಬಂಡಾಯ ಸೇರಿದಂತೆ ಕನ್ನಡ ಸಾಹಿತ್ಯದ ಪ್ರಮುಖ ಕಾಲಘಟ್ಟಗಳನ್ನು ಪ್ರಭಾವಿಸಿದೆ’ ಎಂದು ಅಭಿಪ್ರಾಯಪಟ್ಟರು.
‘ಕುವೆಂಪು ನಾಟಕಗಳಲ್ಲಿ ವೈಚಾರಿಕತೆ’ ವಿಷಯ ಮಂಡಿಸಿದ ಬಾಗಲಕೋಟೆಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿಜಯಕುಮಾರ ಕಟಗಿಹಳ್ಳಿಮಠ, ಕುವೆಂಪು ಅವರು ಪದವಿ ವಿದ್ಯಾರ್ಥಿಯಾಗಿದ್ದಾಗಲೇ ‘ಜಲಗಾರ’ ನಾಟಕ ರಚಿಸಿದರು. ಅವರ ಎಲ್ಲ ನಾಟಕಗಳ ಕೇಂದ್ರ ವೈಚಾರಿಕತೆಯೇ ಆಗಿದೆ‘ ಎಂದರು.
ವಿಜ್ಞಾನ ನಿಕಾಯದ ಡೀನ್ ಲತಾ ಎಂ.ಎಸ್., ಹಣಕಾಸು ಅಧಿಕಾರಿ ಸುಯಮೀಂದ್ರ ಕುಲಕರ್ಣಿ, ಉಪನ್ಯಾಸಕ ಶಿವರಾಜ ಯತಗಲ್ ಉಪಸ್ಥಿತರಿದ್ದರು.
ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಪಾರ್ವತಿ ಸಿ.ಎಸ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ರಾಜೇಶ್ವರಿ ನಿರೂಪಿಸಿದರು. ಶರಣಪ್ಪ ಚಲವಾದಿ ಸ್ವಾಗತಿಸಿದರು. ಗೀತಾಂಜಲಿ ವಂದಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾ ಗೋನಾಳ್ ಸಂಗಡಿಗರಿಂದ ಕುವೆಂಪು ಗೀತೆಗಳ ಗಾಯನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.