ADVERTISEMENT

ರಾಯಚೂರು | ಡಿಸಿ, ಎಸ್ಪಿ, ಜಿಪಂ ಸಿಇಒ ಎಲ್ಲಿದ್ದಾರೆ? ಡಾ.ನಾಗಲಕ್ಷ್ಮಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 4:50 IST
Last Updated 20 ಸೆಪ್ಟೆಂಬರ್ 2025, 4:50 IST
ಕರ್ನಾಟಕ ರಾಜ್ಯ ಮಹಿಳಾ ಆಯೋಗವು ರಾಯಚೂರಿನಲ್ಲಿ ಆಯೋಜಿಸಿದ್ದ ಮಹಿಳಾ ಸ್ಪಂದನ ಕಾರ್ಯಕ್ರಮದಲ್ಲಿ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು
ಕರ್ನಾಟಕ ರಾಜ್ಯ ಮಹಿಳಾ ಆಯೋಗವು ರಾಯಚೂರಿನಲ್ಲಿ ಆಯೋಜಿಸಿದ್ದ ಮಹಿಳಾ ಸ್ಪಂದನ ಕಾರ್ಯಕ್ರಮದಲ್ಲಿ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು   

ರಾಯಚೂರು: ಕರ್ನಾಟಕ ರಾಜ್ಯ ಮಹಿಳಾ ಆಯೋಗ ಇಲ್ಲಿಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಿಳಾ ಸ್ಪಂದನ ಕಾರ್ಯಕ್ರಮ ಹಾಗೂ ಮಹಿಳಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಗೆ ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳು ಬಾರದ ಕಾರಣ ಕೋಲಾಹಲ ಉಂಟಾಯಿತು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೂ ಪ್ರಮುಖ ಅಧಿಕಾರಿಗಳು ಬಾರದಿದ್ದಾಗ ಸಭೆ ಆರಂಭಿಸಿದರು. ನೊಂದ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಆರಂಭಿಸಿದರೂ ಅದಕ್ಕೆ ಸ್ಪಂದಿಸುವ ಅಧಿಕಾರಿಗಳೇ ಇಲ್ಲದ ಕಾರಣ ನಾಗಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದರು.

‘ನಾನು ರಾಯಚೂರಿಗೆ ಬಂದು ಮೂರು ದಿನಗಳು ಆಗಿವೆ. ಒಬ್ಬ ಅಧಿಕಾರಿಯೂ ಫೋನ್‌ ಕರೆ ಮಾಡಿ ವಿಚಾರಿಸಿಲ್ಲ. ಮಧ್ಯಾಹ್ನ 1 ಗಂಟೆವರೆಗೆ ಕಾಯ್ದರೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಅವರೂ ಸಭೆಗೆ ಬಂದಿಲ್ಲ. ಆಯೋಗದ ಅಧ್ಯಕ್ಷೆಯಾದ ನನಗೇ ಸ್ಪಂದಿಸುತ್ತಿಲ್ಲ. ಇನ್ನು ನೊಂದ ಮಹಿಳೆಯರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

‘ನಾನು ರಾಜ್ಯದ 22 ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿ ಬಂದಿದ್ದೇನೆ. ಆದರೆ, ಇಷ್ಟು ಕೆಟ್ಟದಾದ ವ್ಯವಸ್ಥೆಯನ್ನು ಎಲ್ಲೂ ಕಾಣಲಿಲ್ಲ. ಆಯೋಗಕ್ಕೆ ಅಧಿಕಾರವೇ ಇಲ್ಲವೆಂದು ಅಧಿಕಾರಿಗಳು ಭಾವಿಸಿದ್ದಾರೆ. ಆಯೋಗಕ್ಕೆ ಅಧಿಕಾರ ಎಷ್ಟಿದೆ ಎನ್ನುವುದನ್ನು ತೋರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಮಕ್ಕಳೊಂದಿಗೆ ಆಗಮಿಸಿ, ‘ನನ್ನ ಇಬ್ಬರೂ ಹೆಣ್ಕು ಮಕ್ಳಳು  ಅಂಧರಿದ್ದಾರೆ. ಮಕ್ಕಳನ್ನು ಸಲುಹುವುದು ಕಷ್ಟವಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯ ನೌಕರಿ ಕೊಡಿ ಹೇಗಾದರೂ ಮಾಡಿ ಬದುಕಿಕೊಳ್ಳುತ್ತೇವೆ’ ಎಂದು ಕೈಮುಗಿದು ಕೇಳಿಕೊಂಡರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾತನಾಡಿ, ‘ಕಾನೂನಿನಲ್ಲಿ ಅನುಕಂಪದಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶ ಇಲ್ಲ. ಮಹಿಳೆ ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಅಂಕಗಳೂ ಕಡಿಮೆ ಇವೆ. ಹೀಗಾಗಿ ಅವರಿಗೆ ನೌಕರಿ ಕೊಡಲಾಗದು’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇನ್ನೊಬ್ಬ ಶಿಕ್ಷಕಿ ಮಾತನಾಡಿ, ‘ಶಿಕ್ಷಣ ಇಲಾಖೆಯವರು ನನಗೆ 8 ತಿಂಗಳಿಂದ ಸಂಬಳ ಕೊಟ್ಟಿಲ್ಲ. ನಾನು ಹೇಗೆ ಜೀವನ ನಿರ್ವಹಣೆ ಮಾಡಬೇಕು. ನನಗೆ ಬಾಕಿ ಸಂಬಳ ಕೊಡಿಸಿ’ ಎಂದು ಮನವಿ ಮಾಡಿಕೊಂಡರು.

‘ಮಹಾನಗರಪಾಲಿಕೆಗೆ ಮೂರು ವರ್ಷಗಳಿಂದ ಅಲೆದಾಡುತ್ತಿದ್ದೇನೆ. ಅಧಿಕಾರಿಗಳು ಬಿ ಖಾತಾ ಮಾಡಿಕೊಡಲು ಸಿದ್ಧರಿಲ್ಲ. ಸರ್ಕಾರಿ ಕಚೇರಿ ಅಲೆದಾಡಿ ಸಾಕಾಗಿದೆ. ಬಿ–ಖಾತಾ ಮಾಡಿಸಿಕೊಡಿ’ ಎಂದು ಕೇಳಿಕೊಂಡರು.

ಅಧ್ಯಕ್ಷರು ಮಹಿಳೆಯರಿಂದ ಅವಹಾಲು ಸ್ವೀಕರಿಸಿದರೂ ಅದಕ್ಕೆ ಸ್ಪಂದಿಸಲು ಅಧಿಕಾರಿಗಳೇ ಸ್ಥಳದಲ್ಲಿ ಇರಲಿಲ್ಲ. ಇದರಿಂದ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಂಗ ಮಂದಿರದಲ್ಲಿ ಸೇರಿದ ಮಹಿಳೆಯರು ಹಾಗೂ ಅಂಗವಿಕಲರು ಅಧಿಕಾರಿಗಳ ವಿರದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಗಬ್ಬೂರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ವಾಸವಾಗಿರುವ ನನ್ನ ಮಗನ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಶಂಕಿತರ ಹೆಸರು ಬರೆದು ದೂರು ಕೊಟ್ಟರೂ ಜಿಲ್ಲೆಯ ಪೊಲೀಸರು ಸ್ಪಂದಿಸುತ್ತಿಲ್ಲ. ಬಡ ಮಹಿಳೆಯರು ನ್ಯಾಯ ಕೇಳಲು ಎಲ್ಲಿಗೆ ಹೋಗಬೇಕು?‘ ಎಂದು ತಾಯಿಯೊಬ್ಬರು ಪ್ರಶ್ನಿಸಿದರು.

ಸುಮಾರು 400 ಮಹಿಳೆಯರು, ಅಂಗವಿಕಲರು ಆಯೋಗಕ್ಕೆ ಸಲ್ಲಿಸಲು ಮನವಿ ಹಿಡಿದುಕೊಂಡು ಬಂದರು. ಹಿರಿಯ ಅಧಿಕಾರಿಗಳು ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಕಳಿಸಿಕೊಟ್ಟಿದ್ದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗವು ರಾಯಚೂರಿನಲ್ಲಿ ಆಯೋಜಿಸಿದ್ದ ಮಹಿಳಾ ಸ್ಪಂದನ ಕಾರ್ಯಕ್ರಮದಲ್ಲಿ ಮಹಿಳೆಯರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.