ADVERTISEMENT

ರಾಯಚೂರು: ಪ್ರತಿ ಕೆಜಿ ನುಗ್ಗೆಕಾಯಿ ₹ 400, ಬೆಳ್ಳುಳ್ಳಿ ₹120, ಹಿರೇಕಾಯಿ ₹ 60

ಚಂದ್ರಕಾಂತ ಮಸಾನಿ
Published 9 ಡಿಸೆಂಬರ್ 2025, 6:50 IST
Last Updated 9 ಡಿಸೆಂಬರ್ 2025, 6:50 IST
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು   

ರಾಯಚೂರು: ಚಳಿಗಾಲದಲ್ಲಿ ದೈಹಿಕ ಉಷ್ಣತೆ ಕಾಯ್ದುಕೊಳ್ಳಲು ಹಾಗೂ ಗ್ರಾಹಕರು ಹೆಚ್ಚು ಇಷ್ಟುಪಡುವ ನುಗ್ಗೆಕಾಯಿ ಬೆಲೆ ಏರಿಕೆ ಮೂಲಕವೇ ಕೊಂಡುಕೊಳ್ಳುವವರ ಜೇಬಿಗೆ ಬಿಸಿ ಮುಟ್ಟಿಸಿದೆ. ಕಳೆದ ಪ್ರತಿ ಕೆಜಿಗೆ ₹ 120ರ ವರೆಗೆ ಮಾರಾಟವಾಗಿದ್ದ ನುಗ್ಗೆಕಾಯಿ ಈ ವಾರ ಬೆಲೆ ₹ 400ಕ್ಕೆ ಏರಿದೆ.

ತರಕಾರಿ ರಾಜ ಬದನೆಕಾಯಿ ಕಿರೀಟ ಇಳಿಸಿ ಗ್ರಾಹಕರ ನೆರವಿಗೆ ನಿಂತಿದ್ದಾನೆ. ಪ್ರತಿ ಕೆಜಿಗೆ ಬದನೆಕಾಯಿ ₹ 1 ಸಾವಿರ ಕಡಿಮೆಯಾಗಿದೆ. ಹಿರೇಕಾಯಿ ಬೆಲೆ ದುಪ್ಪಟ್ಟಾಗಿದ್ದು, ಹಿರೇಕಾಯಿ ಹಿರಿ ಹಿರಿ ಹಿಗ್ಗಿದೆ.

ಈರುಳ್ಳಿ, ‌ಆಲೂಗಡ್ಡೆ, ಮೆಣಸಿನಕಾಯಿ, ಟೊಮೆಟೊ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ, ಬೀನ್ಸ್ ಬೆಲೆ ಸ್ಥಿರವಾಗಿದೆ. ಪ್ರತಿ ಕ್ವಿಂಟಲ್‌ಗೆ ಗಜ್ಜರಿ ₹ 2 ಸಾವಿರ, ಎಲೆಕೋಸು, ಬದನೆಕಾಯಿ ₹ 1 ಸಾವಿರ, ಹೂಕೋಸು ₹ 1,500, ಬೀಟ್‌ರೂಟ್‌ ₹ 500 ಕಡಿಮೆಯಾಗಿದೆ.

ADVERTISEMENT

ಪ್ರತಿ ಕ್ವಿಂಟಲ್‌ಗೆ ಹಿರೇಕಾಯಿ ₹ 3 ಸಾವಿರ, ಬೆಂಡೆಕಾಯಿ, ತೊಂಡೆಕಾಯಿ ₹ 2 ಸಾವಿರ ಹಾಗೂ ಸೌತೆಕಾಯಿ ₹ 1 ಸಾವಿರ ಹೆಚ್ಚಾಗಿದೆ. ಸೊಪ್ಪುಗಳ ಬೆಲೆಯೂ ಸ್ಪಲ್ಟಮಟ್ಟಿಗೆ ಹೆಚ್ಚಾಗಿದೆ.

ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ , ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಮೆಂತೆ, ಸಬ್ಬಸಗಿ ಸೊಪ್ಪು ಆವಕವಾಗಿದೆ. ಆಂಧ್ರಪ್ರದೇಶ, ತೆಲಂಗಾಣ ಗಡಿ ಗ್ರಾಮ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಸ್ವಲ್ಪ ಎಲೆಕೋಸು, ಹೂಕೋಸು, ಬದನೆಕಾಯಿ ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.

‘ತರಕಾರಿ ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿರುವ ಕಾರಣ ಕೆಲ ತರಕಾರಿ ಬೆಲೆಗಳು ಕಡಿಮೆಯಾಗಿವೆ. ನುಗ್ಗೆಕಾಯಿ ಬೆಲೆ ಕೇಳಿ ಗ್ರಾಹಕರು ಗಾಬರಿಯಾಗುತ್ತಿದ್ದಾರೆ’ ಎಂದು ತರಕಾರಿ ವ್ಯಾಪಾರಿ ಸುನೀಲಕುಮಾರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.