ADVERTISEMENT

ಮಸ್ಕಿ | ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆ –ವಿ.ಸೋಮಣ್ಣ

ರಾಮಲಿಂಗೇಶ್ವರ ಸಹಕಾರಿ ಸಂಘದ ರಜತ ಮಹೋತ್ಸವ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:58 IST
Last Updated 13 ಜುಲೈ 2025, 3:58 IST
ಮಸ್ಕಿಯಲ್ಲಿ ಶನಿವಾರ ನಡೆದ ರಾಮಲಿಂಗೇಶ್ವರ ಸೌಹರ್ದ ಸಹಕಾರಿ ಸಂಘದ ರಜತ ಮಹೋತ್ಸವ ಹಾಗೂ ನೂತನ ಕಟ್ಟಡವನ್ನು ಕೇಂದ್ರದ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು
ಮಸ್ಕಿಯಲ್ಲಿ ಶನಿವಾರ ನಡೆದ ರಾಮಲಿಂಗೇಶ್ವರ ಸೌಹರ್ದ ಸಹಕಾರಿ ಸಂಘದ ರಜತ ಮಹೋತ್ಸವ ಹಾಗೂ ನೂತನ ಕಟ್ಟಡವನ್ನು ಕೇಂದ್ರದ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು   

ಮಸ್ಕಿ: ‘ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸುವ ಜೊತೆಗೆ ಬಡ ಜನರನ್ನು ಮೇಲಕ್ಕೆ ಮೇಲ್ಪಂತಿಗೆ ತರುವ ಮಹತ್ವದ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿದೆ’ ಎಂದು ಕೇಂದ್ರದ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಮಲಿಂಗೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘದ ರಜತ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಕಳೆದ 30 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡಿದೆ. ಮುಂದಿನ ಮೂರು ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ 25 ಕುಟುಂಬಗಳನ್ನು ಮೇಲ್ಪಂತಿಗೆ ತರುವ ಮೂಲಕ ಹೊಸ ಇತಿಹಾಸವನ್ನು ಬರೆಯಲಿದೆ’ ಎಂದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಹಳ್ಳಿ ಜನರ ಬದುಕನ್ನು ಸುಧಾರಿಸಲು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ’ ಎಂದರು.

‘ಸಹಕಾರಿ ಸಂಸ್ಥೆಗಳನ್ನು ಕಟ್ಟೋದು ಸುಲಭ. ಆದರೆ ಅವುಗಳನ್ನು ಪ್ರಾಮಾಣಿಕತೆಯಿಂದ ನಡೆಸೋದು ಕಷ್ಟದ ಕೆಲಸ. ಮನೆ ಯಜಮಾನ ಸರಿಯಾಗಿದ್ದರೆ ಮಾತ್ರ ಮನೆ ಸರಿಯಾಗಿರೋದು’ ಎಂದರು.

‘ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಕಠಿಣ ಪರಿಶ್ರಮದಿಂದ ದುಡಿದು ಬೆಳೆದಿದ್ದಾರೆ. ರಾಮಲಿಂಗೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘವು 3‌,300 ಜನರಿಗೆ ಸಾಲ ನೀಡಿ ಅವರನ್ನು ಸ್ವಂತ ಮಾಲೀಕರನ್ನಾಗಿ ಮಾಡಿದೆ’ ಎಂದು ಶ್ಲಾಘಿಸಿದರು.

‘ದುಡಿಯುವ ಮನಸ್ಸು ಮತ್ತು ಸಾಧಿಸುವ ಛಲ ಇರುವ ಸಾವಿರಾರು ಕಿರು ಕಸುಬುದಾರರಿಗೆ ನೆರವಿನ ಹಸ್ತ ಚಾಚುವ ಮೂಲಕ ಜನಸಾಮಾನ್ಯರಿಗೂ ಬದುಕು ಕಟ್ಟುವ ಭರವಸೆ ಸಹಕಾರ ಸಂಘ ಮಾಡಿದೆ’ ಎಂದರು.

ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ಸುಕೋ ಬ್ಯಾಂಕ್ ಸಂಸ್ಥಾಪಕ ಮನೋಹರ ಮಸ್ಕಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ, ಸಹಕಾರಿ ಸಂಘದ ಅಧ್ಯಕ್ಷ ಪ್ರತಾಪಗೌಡ ಪಾಟೀಲ ಮಾತನಾಡಿದರು.

ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಮಂಟೂರಿನ ಮಹಾಂತಲಿಂಗ ಸ್ವಾಮೀಜಿ, ಶಾಸಕರಾದ ಮಾನಪ್ಪ ವಜ್ಜಲ್, ಡಾ.ಶಿವರಾಜ ಪಾಟೀಲ, ಸಂಯುಕ್ತ ಸಹಕಾರಿ ಮಹಾ ಮಂಡಳದ ರಾಜ್ಯ ಘಟಕದ ಅಧ್ಯಕ್ಷ ಜಿ.ನಂಜೇಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಡಾ.ಶಿವಶರಣಪ್ಪ ಇತ್ಲಿ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಮನಾಥ ಇದ್ದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಮೊದಲಿಗರಾದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ. ಪಕ್ಷ ಹಾಗೂ ದೇವರು ಅವರ ಜೊತೆ ಇದ್ದಾರೆ‌.
– ವಿ.ಸೋಮಣ್ಣ, ಕೇಂದ್ರ ಸಚಿವ

ಬೈಕ್ ರ್‍ಯಾಲಿ ಮೂಲಕ ಸಚಿವರಿಗೆ ಸ್ವಾಗತ

ಮೊದಲ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿ ಕಾರ್ಯಕರ್ತರು ಬಸವೇಶ್ವರ ವೃತ್ತದಿಂದ ಸಹಕಾರಿ ನೂತನ ಕಟ್ಟಡದವರೆಗೆ ಬೈಕ್ ರ್‍ಯಾಲಿ ಮೂಲಕ ಸ್ವಾಗತಿಸಿದರು. ಬಿಜೆಪಿ ಮಂಡಲ ಅದ್ಯಕ್ಷ ಶರಣಯ್ಯ ಸೊಪ್ಪಿಮಠ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಸಚಿವ ವಿ.ಸೋಮಣ್ಣ ಹಾಗೂ ಪ್ರತಾಪಗೌಡ ಪಾಟೀಲ ಪರವಾಗಿ ಕಾರ್ಯಕರ್ತರು ಜಯಘೋಷ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.