ಕವಿತಾಳ: ‘ಅಮೀನಗಡ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನರೇಗಾ ಕೆಲಸ ಮಾಡಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಕೆಲವರಿಗೆ ಕೆಲಸ ನೀಡಿ ಮತ್ತೆ ಕೆಲವರಿಗೆ ಕೆಲಸ ನೀಡಲು ನಿರಾಕರಿಸುತ್ತಿದ್ದಾರೆ’ ಎಂದು ಆರೋಪಿಸಿ ನೂರಾರು ಕಾರ್ಮಿಕರು ಗ್ರಾಮ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ಯೋಜನೆಯಡಿ ನೂರು ದಿನ ಕೆಲಸ ನೀಡಬೇಕು ಮತ್ತು ₹300 ಕೂಲಿ ಪಾವತಿ ಮಾಡಬೇಕು ಎಂದು ಆಗ್ರಹಿಸಿ ಈಚೆಗೆ ಕಾರ್ಮಿಕರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಶುಕ್ರವಾರ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದ ನೂರಕ್ಕೂ ಹೆಚ್ಚಿನ ಕಾರ್ಮಿಕರನ್ನು ತಡವಾಗಿದೆ ಎಂದು ತಡೆದಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದರು.
‘ಕೆರೆ ಹೂಳೆತ್ತುವ ಕೆಲಸ ನಡೆದಿದ್ದು, ಇನ್ನೂರಕ್ಕೂ ಹೆಚ್ಚಿನ ಜನರು ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ತಾವೂ ಕೆಲಸ ಮಾಡುವುದಾಗಿ ತಿಳಿಸಿದರೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ತಾರತಮ್ಯ ಮಾಡುವ ಮೂಲಕ ಕಾರ್ಮಿಕರ ನಡುವೆ ಜಗಳ ತಂದಿಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಕಾರ್ಮಿಕರಾದ ನರಸಪ್ಪ, ಇಮಾಮ್ ಸಾಬ್, ಅಮರೇಗೌಡ ಪೊಲೀಸ್ ಪಾಟೀಲ, ಹುಸೇನ್ ಸಾಬ್, ಇಮ್ಮಣ್ಣ ಗುಡಗುಂಟಿ, ಭಾಷಾಮಿಯಾ, ಹುಸೇನಮ್ಮ, ಆದಮ್ಮ, ನಬಮ್ಮ, ಗಂಗಮ್ಮ, ಪದ್ದಮ್ಮ, ಅನುಸೂಯಾ, ಪಾಲಮ್ಮ ಮತ್ತು ವಿರುಪಮ್ಮ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.