ADVERTISEMENT

ರಾಯಚೂರು: ಟಿಕೆಟ್‌ ಬುಕ್ಕಿಂಗ್ ಹೆಸರಿನಲ್ಲಿ ಶಿಕ್ಷಕಿಗೆ ₹ 2.77 ಕೋಟಿ ವಂಚನೆ!

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 4:49 IST
Last Updated 11 ಫೆಬ್ರುವರಿ 2024, 4:49 IST
ವಂಚನೆ
ವಂಚನೆ   

ಸಿಂಧನೂರು: ತಾಲ್ಲೂಕು ವ್ಯಾಪ್ತಿಯ ಉದ್ಬಾಳ (ಯು) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಯಸುಧಾ ಅವರಿಗೆ ವಿಮಾನದ ಟಿಕೆಟ್ ಬುಕ್ಕಿಂಗ್ ಹೆಸರಿನಲ್ಲಿ ₹ 2.77 ಕೋಟಿ ವಂಚನೆ ಮಾಡಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‌ 3ರಂದು ಜಯಸುಧಾ ಅವರಿಗೆ ಅಪರಿಚಿತರೊಬ್ಬರು ಟೆಲಿಗ್ರಾಂ ಲಿಂಕ್ ಕಳುಹಿಸಿ ಕಿವಿ ಕಂಪನಿಯಲ್ಲಿ ಏರ್ ಟಿಕೆಟ್‍ಗಳನ್ನು ಬುಕ್ಕಿಂಗ್ ಮಾಡಿದರೆ ನಿತ್ಯ ₹ 1000ದಿಂದ ₹3,600 ಲಾಭ ಮಾಡಬಹುದು ಎಂದು ಹೇಳಿದ್ದಾರೆ. ಅವರ ಮಾತಿಗೆ ಮಾರುಹೋದ ಶಿಕ್ಷಕಿ ಕಂಪನಿಯ ವೆಬ್‌ಸೈಟ್‌ನಲ್ಲಿ ಹಣ ನೀಡಿ ಟಿಕೆಟ್‍ಗಳನ್ನು ಬುಕಿಂಗ್ ಮಾಡಿದ್ದಾರೆ. ಕಂಪನಿಯವರು ಮೊದಲು ಸ್ವಲ್ಪ ಹಣ ನೀಡಿದ್ದರಿಂದ ಅದನ್ನು ನಂಬಿ ಟಿಕೆಟ್‍ ಬುಕಿಂಗ್‍ಗಾಗಿ 2023ರ ಸೆಪ್ಟೆಂಬರ್ 3ರಿಂದ 2024ರ ಜನವರಿ 12ರವರೆಗೆ ಹಂತ ಹಂತವಾಗಿ ಅವರ ವಿವಿಧ ಬ್ಯಾಂಕ್ ಖಾತೆಗಳಿಗೆ ₹2,77,52,153 ಹಣ ಹಾಕಿದ್ದಾರೆ.

‘ಇಷ್ಟು ಹಣವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಹಾಕಿದರೂ ಕಂಪನಿಯವರು ಲಾಭಾಂಶ ನೀಡಿಲ್ಲ ಮತ್ತು ಹಾಕಿದ ಹಣವನ್ನೂ ಮರಳಿ ನೀಡದೆ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಬಗ್ಗೆ ರಾಯಚೂರು ಜಿಲ್ಲಾ ಪೊಲೀಸ್ ಠಾಣೆಯ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.