ADVERTISEMENT

ಸಿಂಧನೂರು: ಗಡಿ ಗ್ರಾಮಗಳಲ್ಲಿ ‘ಅಕ್ಷರದ ಹಣತೆ’ ಹಚ್ಚಿದ ಶಾಲೆ

2007ರಲ್ಲಿ ಶಾಲೆ ಆರಂಭ: ಎಸ್‌ಎಸ್‌ಎಲ್‌ಸಿಯಲ್ಲಿ 4 ಬಾರಿ ಶೇ100 ಫಲಿತಾಂಶ

ಡಿ.ಎಚ್.ಕಂಬಳಿ
Published 13 ಅಕ್ಟೋಬರ್ 2025, 6:43 IST
Last Updated 13 ಅಕ್ಟೋಬರ್ 2025, 6:43 IST
ಸಿಂಧನೂರು ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಶಿವಯೋಗಿ ಚೆನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆ
ಸಿಂಧನೂರು ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಶಿವಯೋಗಿ ಚೆನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆ   

ಸಿಂಧನೂರು: ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಶಿವಯೋಗಿ ಚೆನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗಡಿ ಗ್ರಾಮಗಳಲ್ಲಿ ಅಕ್ಷರದ ಹಣತೆ ಬೆಳಗುತ್ತಿದೆ.

2007ರಲ್ಲಿ ಪ್ರಾರಂಭವಾಗಿರುವ ಈ ಶಾಲೆಯು ಶಿಕ್ಷಕರು ಪರಿಶ್ರಮದಿಂದಾಗಿ 4 ಬಾರಿ ಶೇ 100ರಷ್ಟು ಫಲಿತಾಂಶ ಪಡೆದಿದೆ. 2016ರಲ್ಲಿ ಈ ಶಾಲೆಯ ಜ್ಯೋತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ 10ನೇ ಸ್ಥಾನ, 2019ರಲ್ಲಿ ನಾಗರಾಜ ಈರಣ್ಣ 618 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ, 2022ರಲ್ಲಿ ಬಸವಲೀಲಾ ಬಸವರಾಜ 624 ಅಂಕ ಪಡೆದು ಶೇ 99ರಷ್ಟು ಫಲಿತಾಂಶದೊಂದಿಗೆ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ, 2023ರಲ್ಲಿ ಚೈತ್ರಾ ಅಮರೇಗೌಡ 614 ಅಂಕ ಪಡೆದು ಶೇ98.24ರಷ್ಟು ಅಂಕ ಗಳಿಸಿದ್ದಾರೆ.

2025ರ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸುಮಿತ್ರಾ ಉಪ್ಪಳಪ್ಪ 625ಕ್ಕೆ 620 ಅಂಕ ಗಳಿಸಿ ಉತ್ತಮ ಸಾಧನೆ ಮೆರೆದಿದ್ದಾರೆ.

ADVERTISEMENT

ಹಾಜರಾತಿಗೆ ಒತ್ತು: ಶಿಕ್ಷಕರು ಮನೆ-ಮನೆಗೆ ಸಂಚರಿಸಿ ಮಕ್ಕಳನ್ನು ಶಾಲೆಗೆ ಕರೆ ತರಲಾಗುತ್ತಿದೆ. ಶಾಲೆ ಬಿಟ್ಟ ಮಕ್ಕಳ ಪಾಲಕರನ್ನು ಸಂಪರ್ಕಿಸಿ ಶಾಲೆಗೆ ಕಳುಹಿಸುವಂತೆ ಜಾಗೃತಿ ಮೂಡಿಸುತ್ತಿರುವುದು ವಿಶೇಷ. ಶೇ 100ರಷ್ಟು ಹಾಜರಾತಿ ಇದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ಕೊಡುತ್ತಿರುವುದರಿಂದ ಹಾಜರಾತಿ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ.

ಬೀರಪ್ಪ ಎನ್ನುವ ವಿದ್ಯಾರ್ಥಿ 2019ರಿಂದ 3 ವರ್ಷ ಒಂದು ದಿನವೂ ತಪ್ಪಿಸದಂತೆ ಶಾಲೆಗೆ ಹಾಜರಾಗಿರುವುದು ಅಧಿಕಾರಿ ವರ್ಗದಲ್ಲೂ ಆಶ್ಚರ್ಯ ಹುಟ್ಟಿಸಿತ್ತು ಎಂದು ಶಿಕ್ಷಕರು ಹೇಳುತ್ತಾರೆ.

ಶಾಲೆಯ ಹಿಂದಿ ಶಿಕ್ಷಕರ ಕರ್ತವ್ಯ ಪ್ರಜ್ಞೆ ಮತ್ತು ವಿದ್ಯಾರ್ಥಿಗಳ ಬಗೆಗಿನ ಶೈಕ್ಷಣಿಕ ಕಾಳಜಿಯನ್ನು ಗ್ರಾಮಸ್ಥರು ಸ್ಮರಿಸುತ್ತಾರೆ.

ಕಲಿಕೋಪಕರಣಗಳ ಸೌಕರ್ಯ: ಶಾಲೆಯಲ್ಲಿ ಹೋಮ್ ಥಿಯೇಟರ್ ಹಾಗೂ ಸ್ಮಾರ್ಟ್ ಟಿವಿ ಸೌಲಭ್ಯ ಇದ್ದು, ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಿದೆ. ‘ಹೊತ್ತಿಗೆ ವನ’ ಹೆಸರಿನಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗಿದ್ದು, ನೂರಾರು ಪಠ್ಯಪುಸ್ತಕ ಮತ್ತು ಕತೆ, ಕವನ, ಸೃಜನಶೀಲ ಸಾಹಿತ್ಯದ ಪುಸ್ತಕಗಳನ್ನು ಸಂಗ್ರಹಿಸಿ ವಿದ್ಯಾರ್ಥಿಗಳ ಓದಿಗೆ ಅನುಕೂಲ ಕಲ್ಪಿಸಲಾಗಿದೆ.

ರಾಜ್ಯಮಟ್ಟದಲ್ಲೂ ಸಾಧನೆ: ರಾಜ್ಯಮಟ್ಟದ ವಿಜ್ಞಾನ ವಿಚಾರಗೋಷ್ಠಿ, ರಸಪ್ರಶ್ನೆ, ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಈ ಶಾಲೆಯ ವಿದ್ಯಾರ್ಥಿಗಳು 5 ಬಾರಿ ವಿಜೇತರಾಗಿದ್ದಾರೆ. ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತಯಾರಿಸಿದ ಎರೆಹುಳು ತೊಟ್ಟಿ ಗಮನ ಸೆಳೆಯುತ್ತಿದೆ.

ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಾವಯವ ಕೃಷಿ ಕೈತೋಟದಲ್ಲಿ ವಿವಿಧ ಹೂ, ಹಣ್ಣು, ಔಷಧಯುಕ್ತ 320 ಗಿಡಗಳನ್ನು ಬೆಳೆಸಲಾಗಿದೆ. ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಪರಿಶ್ರಮ ಗಮನಿಸಿ, ನೇತ್ರ ತಜ್ಞ ಡಾ.ಚೆನ್ನನಗೌಡ, ಆಕ್ಸ್‌ಫರ್ಡ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ಅವರು ಶಾಲಾ ಅಭಿವೃದ್ಧಿಗೆ ದೇಣಿಗೆ ನೀಡಿದ್ದಾರೆ ಎಂದು ಮುಖ್ಯಶಿಕ್ಷಕ ಹಂಪನಗೌಡ ಬೂತಲದಿನ್ನಿ ಸ್ಮರಿಸುತ್ತಾರೆ.

ಸಿಂಧನೂರು ತಾಲ್ಲೂಕಿನ ವಳಬಳ್ಳಾರಿ ಗ್ರಾಮದ ಶಿವಯೋಗಿ ಚೆನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಮಾಡಿರುವ ಸಾವಯವ ಕೃಷಿ ಕೈ ತೋಟವನ್ನು ಶಿಕ್ಷಕರು ವಿದ್ಯಾರ್ಥಿಗಳು ವೀಕ್ಷಣೆ ಮಾಡುತ್ತಿರುವುದು
ಶಿವಯೋಗಿ ಚೆನ್ನಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಪಾಲಕರ ಸಭೆ ನಡೆಸುತ್ತಿರುವುದು

ಶಿಕ್ಷಕರ ಪರಿಶ್ರಮ

ವಿದ್ಯಾರ್ಥಿಗಳ ಬಗ್ಗೆ ಹೊಂದಿರುವ ಕಳಕಳಿ ಸ್ಮರಣಾರ್ಹ. ಶಿಕ್ಷಕರ ಪ್ರೇರಣೆಯಿಂದ ನಾನು ಇಂದು ಉನ್ನತ ಹುದ್ದೆ ಪಡೆದಿದ್ದೇನೆ ಸತ್ಯಮ್ಮ ಹಳೆ ವಿದ್ಯಾರ್ಥಿನಿ (ಲಿಂಗಸುಗೂರು ತಹಶೀಲ್ದಾರ್) ಶಿಕ್ಷಕರಾದ ರಾಮರೆಡ್ಡಿ ಮಂಜುಳಾ ಸುರೇಂದ್ರ ಶಂಭುಲಿಂಗಯ್ಯ ಮಲ್ಲಪ್ಪ ಸಂಗಯ್ಯ ಉಳ್ಳಾಗಡ್ಡಿ ಚನ್ನಬಸಪ್ಪ ಬಸಲಿಂಗಪ್ಪ ಅವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ವಿಶೇಷ ಕಾಳಜಿ ವಹಿಸುತ್ತಾರೆ ನಾಗರಾಜ ಎಂಬಿಬಿಎಸ್ ವಿದ್ಯಾರ್ಥಿ ವಳಬಳ್ಳಾರಿ ಗಿಣಿವಾರಗಳಲ್ಲಿ 20 ವರ್ಷಗಳ ಹಿಂದೆ ಮೂರ್ನಾಲ್ಕು ಜನ ಸರ್ಕಾರಿ ಹುದ್ದೆಯಲ್ಲಿದ್ದರು. ಈ ಪ್ರೌಢಶಾಲೆಯ ಶಿಕ್ಷಕರ ಪ್ರಯತ್ನದಿಂದ ನೂರಾರು ಜನ ಇಂದು ಸರ್ಕಾರಿ ಹುದ್ದೆಯಲ್ಲಿದ್ದಾರೆ ಜಂಬಣ್ಣ ಸಾಹುಕಾರ ವಳಬಳ್ಳಾರಿ ನಿವಾಸಿ ಹಿಂದಿ ಶಿಕ್ಷಕರಾದ ಪಾಪಣ್ಣ ಕೆ.ಜಿ ಅವರು ಮನೆಗೆ ಬಂದು ಶಾಲೆಗೆ ಕಳುಹಿಸುವಂತೆ ನಮ್ಮ ತಂದೆ–ತಾಯಿಯವರ ಮನವೊಲಿಸಿ ಶಿಕ್ಷಣ ನೀಡಿದ್ದರಿಂದಲೇ ನನಗೀಗ ದೇಶ ಸೇವೆ ಮಾಡಲು ಅವಕಾಶ ಲಭಿಸಿದೆ ಹಾಲೇಶ ಕುಮಾರ ಬಾದರ್ಲಿ ಕಾಶ್ಮೀರದಲ್ಲಿ ಅಗ್ನಿವೀರ ಯೋಧ

ಸರ್ಕಾರಿ ಶಾಲೆಯಲ್ಲೇ ಶಿಕ್ಷಕರ ಮಕ್ಕಳು

ಸರ್ಕಾರಿ ಶಾಲೆ ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದಿಸುವ ಈ ದಿನಮಾನದಲ್ಲಿ ವಳಬಳ್ಳಾರಿ ಚೆನ್ನಬಸವೇಶ್ವರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ತಾವು ಕರ್ತವ್ಯ ನಿರ್ವಹಿಸುವ ಶಾಲೆಯಲ್ಲಿಯೇ ತಮ್ಮ ಮಕ್ಕಳಿಗೆ ಪ್ರವೇಶ ನೀಡಿ ಸರ್ಕಾರಿ ಶಾಲೆಯ ಬಗೆಗಿನ ಕಾಳಜಿ ಮತ್ತು ಪ್ರೀತಿ ಮೆರೆದಿರುವುದು ಗಮನಾರ್ಹವಾಗಿದೆ.

ಮಠದಿಂದ ಭೂದಾನ

ವಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದಿಂದ ಶಾಲೆಗೆ 2 ಎಕರೆ ಭೂದಾನ ಮಾಡಲಾಗಿದೆ. ಜೊತೆಗೆ ಶಾಲೆಯ ಪ್ರತಿಯೊಂದು ಕಾರ್ಯಕ್ರಮಕ್ಕೆ ಮಠದಿಂದ ಅನ್ನದಾಸೋಹ ವ್ಯವಸ್ಥೆ ಇದೆ. ಸಹನಾ ಆಸ್ಪತ್ರೆಯ ಮೆಡಿಕಲ್ ಸ್ಟೋರ್ ಮಾಲೀಕ ರಾಜಶೇಖರ ಅವರು ಮಾದರಿ ಶೌಚಾಲಯ ನಿರ್ಮಾಣಕ್ಕೆ ₹10 ಲಕ್ಷ ನೇತ್ರ ತಜ್ಞ ಡಾ.ಚೆನ್ನನಗೌಡ ಪಾಟೀಲ ಅವರು ಗ್ರಂಥಾಲಯಕ್ಕೆ ₹50 ಸಾವಿರ ಹನಿ ನೀರಾವರಿ ಸೌಕರ್ಯಕ್ಕೆ ಆಕ್ಸ್‌ಫರ್ಡ್‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ₹50 ಸಾವಿರ ನೀಡಿದ್ದರಿಂದ ಮಕ್ಕಳಿಗೆ ಆಧುನಿಕ ಸೌಕರ್ಯ ನೀಡಲು ಸಹಕಾರಿಯಾಗಿದೆ ಎನ್ನುತ್ತಾರೆ ಮುಖ್ಯಶಿಕ್ಷಕ ಹಂಪನಗೌಡ ಬೂತಲದಿನ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.