ADVERTISEMENT

ಮರಳು ದಂಧೆಕೋರರಿಂದ ಜೀವ ಬೆದರಿಕೆ: ಶಾಸಕಿ ಕರೆಮ್ಮ ದೂರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 23:30 IST
Last Updated 19 ಜನವರಿ 2026, 23:30 IST
ಕರೆಮ್ಮ ಜಿ ನಾಯಕ
ಕರೆಮ್ಮ ಜಿ ನಾಯಕ   

ದೇವದುರ್ಗ: ‘ಮರಳು ದಂಧೆಕೋರರಿಂದ ನನಗೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರಿಗೆ ಜೀವ ಬೆದರಿಕೆಯಿದೆ’ ಎಂದು ಜೆಡಿಎಸ್‌ ಶಾಸಕಿ ಕರೆಮ್ಮ ಜಿ.ನಾಯಕ ಆರೋಪಿಸಿದರು.

‘ಭಾನುವಾರ ಬೆಳಿಗ್ಗೆ 8 ಗಂಟೆಗೆ ಮರಳು ದಂಧೆಕೋರರ ನೂರಾರು ಜನರ ತಂಡ ನಮ್ಮ ಮನೆಗೆ ದಿಢೀರ್ ಬಂದು ಬೆದರಿಕೆ ಹಾಕಿದ್ದಾರೆ. ಮರಳು ದಂಧೆಕೋರರ ಜತೆ ಪೊಲೀಸರು ಶಾಮೀಲಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾರೆ’ ಎಂದು ನೇರ ಆರೋಪ ಮಾಡಿದರು.

‘ಗುಪ್ತಚರ ಇಲಾಖೆ ಸಿಬ್ಬಂದಿ ನಿಷ್ಕ್ರಿಯವಾಗಿದ್ದಾರೆ. ಮರಳು ಅಕ್ರಮ ಸಾಗಾಟ, ಮಟ್ಕಾ, ಮದ್ಯ ಮಾರಾಟ ಹಾಗೂ ಗಾಂಜಾ ಮಾರಾಟಗಾರರಿಗೆ ಪೊಲೀಸರು ರಕ್ಷಕರಾಗಿ ಕಾಯುತ್ತಿದ್ದಾರೆ. ತಾಲ್ಲೂಕಿನಲ್ಲಿ 7–8 ಪೊಲೀಸರು ಹಗಲು ರಾತ್ರಿ ಕಾರು–ಜೀಪ್ ಮೂಲಕ ದಂಧೆಕೋರರಿಂದ ಹಣ ವಸೂಲಿ ಮಾಡುತ್ತಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು. 

ADVERTISEMENT

‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ದೂರು ನೀಡಿ ರಕ್ಷಣೆ ಕೇಳುತ್ತೇನೆ. ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಶ್ರೀದೇವಿ ನಾಯಕ ಸಹೋದರ ಶ್ರೀನಿವಾಸ ನಾಯಕ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಕೊಲೆ ಬೆದರಿಕೆ ಹಾಕಿದೆ’ ಎಂದು ಕರೆಮ್ಮ ಆರೋಪಿಸಿದ್ದಾರೆ.

ಜೀವ ಬೆದರಿಕೆ ಕುರಿತು ಶಾಸಕಿ ಸೋಮವಾರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

60 ಜನರ ವಿರುದ್ಧ ಎಫ್‌ಐಆರ್‌

ದೂರಿನ ಆಧಾರದಲ್ಲಿ ಶ್ರೀನಿವಾಸ ನಾಯಕ ರವಿ ಪ್ರಕಾಶ ಅಕ್ಕರಕಿ ಸುರೇಶ ನಾಯಕ ಚಿಂತಲಕುಂಟ ವೀರೇಶಗೌಡ ಯಾಟಗಲ್ ಹನುಮಂತ್ರಾಯ ಕರಿಗುಡ್ಡ ಅಮರೇಶ ಅಂಜಳ ಸೇರಿ 60 ಜನರ ವಿರುದ್ಧ ದೇವದುರ್ಗ ಪೊಲೀಸ್‌ ಠಾಣೆಯಲ್ಲಿ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಶಾಸಕಿ ಕರೆಮ್ಮ ಹಾಗೂ ಪಕ್ಷದ ಕಾರ್ಯಕರ್ತರಿಗೆ ಜೀವಬೆದರಿಕೆ ಕುರಿತು ಜೆಡಿಎಸ್ ಮುಖಂಡ ವಕೀಲ ಹನುಮಂತರಾಯ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.