ADVERTISEMENT

ದೇವರೆಡ್ಡರ ಸರ್ಕಾರಿ ಶಾಲೆಗೆ ನೀರಿಗೆ ಬರ: ವಿದ್ಯಾರ್ಥಿಗಳ ಪರದಾಟ

ಅಮರೇಶ ನಾಯಕ
Published 14 ಜನವರಿ 2026, 6:21 IST
Last Updated 14 ಜನವರಿ 2026, 6:21 IST
ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರೆಡ್ಡರ ಸರ್ಕಾರಿ ಶಾಲೆಗೆ ಸರಬರಾಜು ಆಗುವ ಬಾವಿಯಲ್ಲಿರುವ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು
ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರೆಡ್ಡರ ಸರ್ಕಾರಿ ಶಾಲೆಗೆ ಸರಬರಾಜು ಆಗುವ ಬಾವಿಯಲ್ಲಿರುವ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು   

ಹಟ್ಟಿ ಚಿನ್ನದ ಗಣಿ: ಸಮೀಪದ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೇವರೆಡ್ಡರ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ನೀರಿಲ್ಲದೆ ಇಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುತ್ತಿದ್ದಾರೆ.

ಗುರುಗುಂಟಾ ಸಮೀಪದ ಪೈದೊಡ್ಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವರೆಡ್ಡರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 116 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಬಿಸಿಯೂಟಕ್ಕೂ ನೀರಿಲ್ಲದೆ ಕೆಲವೊಂದು ಸಾರಿ, ಬಾವಿ ನೀರು ತಂದು ಅಡುಗೆ ಮಾಡಲಾಗುತ್ತಿದೆ.

ಊಟ ಮಾಡಿದ ನಂತರ ಮಕ್ಕಳಿಗೆ ಕುಡಿಯಲು ನೀರಿಲ್ಲ. ಶಾಲೆಗೆ ಬರುವಾಗ ಬಾಟಲಿನಲ್ಲಿ ನೀರು ತರಬೇಕು ಇಲ್ಲವಾದರೆ ಸಹಪಾಠಿಗಳಿಂದ ನೀರು ಕೇಳಿ ಕುಡಿಯಬೇಕಾಗಿದೆ. ನಮ್ಮ ಸಮಸ್ಯೆಯನ್ನು ಆಲಿಸುವವರೆ ಇಲ್ಲದಂತಾಗಿದೆ ಎಂದು ತಮ್ಮ ಅಳಲನ್ನು ವಿದ್ಯಾರ್ಥಿಗಳು ತೊಡಿಕೊಂಡರು. ಅನತಿ ದೂರದಲ್ಲಿ ಬಾವಿ ಇದೆ. ಆದರೆ ಭಾವಿಯಲ್ಲಿ ಕಸ, ಕಡ್ಡಿ ಬಿದ್ದು ಬಾವಿಯ ನೀರು ಪಾಚಿಗಟ್ಟಿದೆ. ಇದೇ ನೀರನ್ನು ಅಡುಗೆಗೆ ಬಳಸಬೇಕಾದ ಸ್ಧಿತಿ ಎದುರಾಗಿದೆ ಎನ್ನುತ್ತಾರೆ ಇಲ್ಲಿನ ಅಡುಗೆ ಸಿಬ್ಬಂದಿ.

ADVERTISEMENT

‘ಹಸಿರು ಬಣ್ಣಕ್ಕೆ ತಿರುಗಿದ ನೀರಿನಿಂದ ಅಡುಗೆ ಮಾಡಿ ಊಟದ ನಂತರ ಮಕ್ಕಳಿಗೆ ವಾಂತಿಭೇದಿ, ಜ್ವರ, ನೆಗಡಿ, ಕೆಮ್ಮು, ಶೀತ ಉಂಟಾದರೆ ಅದಕ್ಕೆ ಯಾರು ಹೊಣೆಗಾರರು. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಇತ್ತ ಯಾವುದೇ ಗಮನಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ’ ಎನ್ನುತ್ತಾರೆ ಇಲ್ಲಿನ ಜನ.

‘ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದರೂ ನಮ್ಮ ಗೊಳ್ಳನ್ನು ಕೇಳುವವರೇ ಇಲ್ಲದಂತಾಗಿದೆ’ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ವಿದ್ಯಾರ್ಥಿಗಳಿಗೆ ಶೌಚಾಲಯವೂ ಇಲ್ಲ. ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಶಿಕ್ಷಣ ಇಲಾಖೆಯ ಬಿಇಒ ಅವರಿಗೆ ಪತ್ರ ಬರೆದರೂ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ನಾವೇ ನೀರು ತಂದು ಮಕ್ಕಳಿಗೆ ಕೊಡಬೇಕಾದ ಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

‘‌ಸರ್ಕಾರಿ ಶಾಲೆಯ ಮಕ್ಕಳಿಗೆ ಅಡುಗೆ ಹಾಗೂ ಕುಡಿಯಲು ನೀರಿಲ್ಲ. ಇಲ್ಲಿನ ಶಿಕ್ಷಕರೆ ಬೈಕ್‌ ಮೇಲೆ ನೀರು ತಂದು‌ ವಿದ್ಯಾರ್ಥಿಗಳಿಗೆ ಕೊಡುತ್ತಾರೆ. ಇದೇ ಅವರ ನಿತ್ಯದ ಕೆಲಸವಾಗಿದೆ. ಸಂಬಂದಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಿರ್ಲಕ್ಷ್ಯವಹಿಸಿದರೆ ಶಾಲೆಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ರಾಜ್ಯ ರೈತ ಸಂಘದ ಸಂಚಾಲಕ ಹನುಮಂತ ಸುಗೂರು ಎಚ್ವರಿಕೆ ನೀಡಿದ್ದಾರೆ.

ದೇವರೆಡ್ಡರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರೇ ಕ್ಯಾನ್ ತಂದು ನೀರು ತರುತ್ತಿರುವುದು
ದೇವರರೆಡ್ಡರ ಸರ್ಕಾರಿ ಶಾಲೆಗೆ ಕುಡಿಯುವ ನೀರಿನ ವ್ಯವಸ್ಧೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿ
ಹನುಮಂತ ಗ್ರಾಮಸ್ಧ
ನೀರಿನ ಸಮಸ್ಯೆ ಬಗ್ಗೆ ಹಲವು ಸಲ ಮೇಲಧಿಕಾರಿಗಳಿಗೆ ಪತ್ರ ಬರೆದರೂ ಸಮಸ್ಯೆ ಹಾಗೆ ಉಳಿದಿದೆ. ಮೇಲಧಿಕಾರಿಗಳು ಸ್ಪಂದಿಸಬೇಕಿದೆ
ಮಂಜುನಾಥ ದೇವರೆಡ್ಡರ ಸರ್ಕಾರಿ ಶಾಲೆ ಮುಖ್ಯಗುರು
ದೇವರೆಡ್ಡರ ಸರ್ಕಾರಿ ಶಾಲೆಯ ಮಕ್ಕಳಿಗೆ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಶಿಕ್ಷಣ ಇಲಾಖೆ ವಿರುದ್ದ ಹೋರಾಟ ನಡೆಸಲಾಗುವದು
ರಮೇಶ ಎಸ್‌ಎಫ್‌ಐ ಸಂಘದ ಮುಖಂಡ