
ಲಿಂಗಸುಗೂರು: ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಕಾರ್ಡ್) 2026-31ವರೆಗಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಸಿದ್ಧರಾಮೇಶ, ಉಪಾಧ್ಯಕ್ಷರಾಗಿ ಶಿವಗ್ಯಾನಪ್ಪ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸಿದ್ಧರಾಮೇಶ ಆದಾಪುರ, ಸಿದ್ಧನಗೌಡ ಮಾಕಾಪುರ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶಿವಗ್ಯಾನಪ್ಪ ಹೂವಿನಭಾವಿ, ಯಂಕಮ್ಮ ಭೂಪುರ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 15 ಜನ ನಿರ್ದೇಶಕ ಸ್ಥಾನದ ಬಲದ ಪಿಕಾರ್ಡ್ ಬ್ಯಾಂಕ್ ಚುನಾವಣೆಗೆ ನಡೆದ ಮತದಾನದಲ್ಲಿ ಅಧ್ಯಕ್ಷ ಸ್ಥಾನದ ಸಿದ್ಧರಾಮೇಶ, ಶಿವಗ್ಯಾನಪ್ಪ 8 ಮತಗಳನ್ನು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರೆ ಸಿದ್ಧನಗೌಡ ಹಾಗೂ ಯಂಕಮ್ಮ 7 ಮತಗಳನ್ನು ಪಡೆದು ಪರಾಭವಗೊಂಡರು.
ಬಯ್ಯಾಪುರ ಬಣ ಮೇಲಗೈ: ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬೆಂಬಲಿತ ಅಭ್ಯರ್ಥಿಗಳ ನಡುವೆ ಈ ಭಾರಿ ಪಿಕಾರ್ಡ ಬ್ಯಾಂಕ್ ಚುನಾವಣೆ ಜಿದ್ದಾಜಿದ್ದಿನಿಂದ ನಡೆಯಿತು. ಅಧಿಕಾರ ಹಿಡಿಯುವಲ್ಲಿ ಬಯ್ಯಾಪುರ ಬಣ ಯಶಸ್ವಿಯಾಗಿದೆ. ಬಿಜೆಪಿ ಬೆಂಬಲಿತ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗೆ ಬೆಂಬಲಿಸಿದ್ದ ಹೂಲಗೇರಿ ಬಣಕ್ಕೆ ಹಿನ್ನಡೆ ಉಂಟಾಗಿದೆ.
ಕಾಂಗ್ರೆಸ್‌ನಲ್ಲಿದ್ದರೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸಿದ್ದ ಹೂಲಗೇರಿ ಅವರಿಗೆ ಮುಖಭಂಗವಾಗಿದೆ. ಇನ್ನೂ ಮುಂದೆ ಅಮರೇಗೌಡ ಬಯ್ಯಾಪುರ ಹಾಗೂ ಶರಣಗೌಡ ಬಯ್ಯಾಪುರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿ ಮುಂಬರುವ ಚುನಾವಣೆಗಳಲ್ಲಿ ಅಧಿಕಾರ ಹಿಡಿಯವಲ್ಲಿ ಹೋರಾಟ ಮಾಡುವುದಾಗಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಪಾಮಯ್ಯ ಮುರಾರಿ ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಬಸವರಾಜಗೌಡ ಗಣೇಕಲ್, ವಿರುಪಾಕ್ಷಪ್ಪ ಹಂದ್ರಾಳ, ಶಶಿಧರ ಆಶಿಹಾಳ ಸೇರಿದಂತೆ ಅನೇಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.