ADVERTISEMENT

ಕನಕಗುರು ಪೀಠದ ಸಿದ್ದರಾಮನಂದ ಸ್ವಾಮೀಜಿ ಹೃದಯಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 2:06 IST
Last Updated 15 ಜನವರಿ 2026, 2:06 IST
   

ತಿಂಥಣಿ ಬ್ರಿಜ್ಡ್ (ರಾಯಚೂರು ಜಿಲ್ಲೆ): ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿ (49) ಅವರು ಗುರುವಾರ ಬೆಳಗಿನ ಜಾವ ಹೃದಯಘಾತದಿಂದಾಗಿ ನಿಧನರಾಗಿದ್ದಾರೆ.

ಬೆಳಗಿನ ಜಾವ 3.40 ರ ಸುಮಾರಿಗೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಸ್ವಾಮೀಜಿ ಅವರನ್ನು ಲಿಂಗಸೂಗೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲು ಮಾಡುವುದರಲ್ಲಿ ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ ಎಂದು ಪೀಠದ ಭಕ್ತರು ತಿಳಿಸಿದ್ದಾರೆ.

ತಿಂಥಣಿಯ ಕನಕ ಗುರು ಪೀಠದಲ್ಲಿಯೇ ಸ್ವಾಮೀಜಿ ಅಂತ್ಯಕ್ರಿಯೆ ನಡೆಸಲಾಗುವುದು. ಅಲ್ಲದೇ

ADVERTISEMENT

ಹಾಲುಮತದ ಪದ್ಧತಿಯಂತೆ ಅಂತ್ಯಕ್ರಿಯೆ ಸಿದ್ಧತೆ ನಡೆಸಲಾಗಿದೆ ಎಂದು ಭಕ್ತರು ತಿಳಿಸಿದ್ದಾರೆ

ಸಿದ್ದರಾಮಾನಂದ ಸ್ವಾಮೀಜಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯವರು. ಮಹದೇವಯ್ಯ ಮತ್ತು ಜಯಮ್ಮ ದಂಪತಿಯ 2ನೇ ಪುತ್ರರು.

ಸಿದ್ದರಾಮನಂದ ಸ್ವಾಮೀಜಿಯ ಮೂಲ ಹೆಸರು ಮೋಹನ್ ಪ್ರದಾನ ಎಂದು ತಿಳಿದುಬಂದಿದೆ.

ಆಧ್ಯಾತ್ಮಿಕ ಹಸಿನಿಂದ 18ನೇ ವಯಸ್ಸಿಗೆ ಮನೆ ಬಿಟ್ಟು ಸಂಚಾರ ಮೊದಲು ಜೈನ, ಕ್ರೈಸ್ತ, ಬ್ರಹ್ಮಕುಮಾರಿ ಪಂಥಗಳ ಪ್ರಭಾವಕ್ಕೆ ಒಳಗಾಗಿದ್ದರು.

ಶರಣ ಸಾಹಿತ್ಯದ ಜೊತೆಗೆ ಎಲ್ಲಾ ಧರ್ಮಗಳ ಅಧ್ಯಯನ ಮಾಡಿದ ಸ್ವಾಮೀಜಿಗಳು ಚಿತ್ರದುರ್ಗದ ಮುರುಘಾಮಠದಲ್ಲಿ ಕೆಲ ಕಾಲ ಅಧ್ಯಯನ ಅ ಬಳಿಕ ನಾಲ್ಕು ವರ್ಷಗಳ ಕಾಲ ಸಿಂಧನೂರಿನಲ್ಲಿ ಸ್ವಾಮೀಜಿ ವಾಸ್ತವ್ಯ ಮಾಡಿದರು.

ನಂತರ ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಜ್ಡ್ ಹತ್ತಿರ 2011 ರಲ್ಲಿ ಕನಕಗುರು ಪೀಠಕ್ಕೆ ಬಂದ ಸಿದ್ದರಾಮನಂದಾ ಸ್ವಾಮೀಜಿ ಕಾಗಿನೆಲೆ ಕನಕ ಗುರುಪೀಠ ಸ್ಥಾಪನೆ ಮಾಡಿದರು.

ತಿಂಥಣಿ ಬ್ರಿಜ್ ನಲ್ಲಿ ಕಲಬುರಗಿ ವಿಭಾಗದ ಕನಕ ಗುರು ಪೀಠ ಪ್ರಾರಂಭಿಸಿ ಪ್ರತಿ ವರ್ಷ ಜನವರಿ 12,13,14 ಹಾಲುಮತ ಸಂಸ್ಕೃತಿ ವೈಭವ ನಡೆಸುತ್ತಿದ್ದರು. ಈ ವರ್ಷವೂ ಹಾಲುಮತ ಸಾಹಿತ್ಯ ಸಮ್ಮೇಳ ಹಮ್ಮಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಈ ಹಿಂದೆ ಪ್ರತಿ ವರ್ಷದ ಕಾರ್ಯಕ್ರಮಕ್ಕೆ ಸಿಎಂ ಸೇರಿದಂತೆ ರಾಜ್ಯದ ಬಹುತೇಕ ಗಣ್ಯರು ಆಹ್ವಾನಿಸಿ ಸನ್ಮಾನಿಸಿ ಗೌರವಿಸುವ ಕೆಲಸ ಮಾಡಿದ್ದರು. ಕನಕ ಪೀಠದಲ್ಲಿ ಪ್ರಾಥಮಿಕ ಶಾಲೆಯಿಂದ ಪಿಯುವರೆಗೂ ಶಿಕ್ಷಣ ನೀಡುವ ಕೆಲಸ ಸ್ವಾಮೀಜಿ ಮಾಡಿದ್ದಾರೆ.

ಶಾಲಾ ಮಕ್ಕಳಿಗೆ ಉಚಿತ ದಾಸೋಹದ ವ್ಯವಸ್ಥೆ ಕೂಡ ಮಾಡಿದ್ದರು. ಅಲ್ಲದೇ ಬಾಗಲಕೋಟೆ ಜಿಲ್ಲೆಯ ಗುಡೂರಿನಲ್ಲಿ ಪದವಿ ಕಾಲೇಜು ಮುದ್ದೇಬಿಹಾಳದಲ್ಲಿ ಪದವಿ ಕಾಲೇಜು ಕೊಪ್ಪಳ ಜಿಲ್ಲೆಯ ಹಾಲವರ್ತಿ ಹಾಗೂ ಕುಷ್ಟಗಿ ತಾಲ್ಲೂಕಿನ ಬಾದಿಮನಾಳದಲ್ಲಿ ಶಾಖಾಮಠ ಸ್ಥಾಪನೆ ಮಾಡಿದ್ದಾರೆ.

ಕನಕಗುರು ಪೀಠದಲ್ಲಿ ಸಾಮೂಹಿಕ ವಿವಾಹ, ಆರೋಗ್ಯ ಶಿಬಿರ, ರಕ್ತದಾನ ಆಯೋಜನೆ ಮಾಡಿದ್ದರು. ಸಾಹಿತ್ಯ, ಸಮಾಜಸೇವೆ ಮಾಡಿದ ಗಣ್ಯರಿಗೆ ಭಾಸ್ಕರ, ಕನಕರತ್ನ, ಸಿದ್ಧ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.